ರಾಮನಗರ : ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಮಂಗಳವಾರ ರಾತ್ರಿ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಬೀದಿಗಿಳಿದ ಅವರ ಬೆಂಬಲಿಗರು ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದರು. ರಸ್ತೆಗಳಲ್ಲಿ ಟೈರ್‍ಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕನಕಪುರ ಶಾಸಕ ಡಿಕೆ ಶಿವಕುಮಾರ್ ಬಂಧನದಿಂದ ಪ್ರಕ್ಷುಬ್ಧಗೊಂಡಿದ್ದ ಜಿಲ್ಲೆಯ ವಾತಾವರಣ ಸಹಜ ಸ್ಥಿತಿಗೆ ಬರುತ್ತಿದ್ದು, ಇಂದಿನಿಂದ ಬಸ್ ಸಂಚಾರ ಆರಂಭವಾಗಲಿದೆ.
ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರು. ಬಸ್ ಸಂಚಾರ ರದ್ದುಗೊಂಡಿದ್ದು, ಜಿಲ್ಲೆಯಲ್ಲಿ ಅಘೋಷಿತ ವಾತಾವರಣ ನಿರ್ಮಾಣವಾಗಿತ್ತು. ಕೇವಲ ರಾಮನಗರದಲ್ಲಿ ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಘಟನೆಯಲ್ಲಿ ಎರಡು ಬಸ್‍ಗೆ ಬೆಂಕಿ ಹಚ್ಚಲಾಗಿದ್ದು, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಬಂಧನ ವಿರೋಧಿಸಿ ನಿನ್ನೆ ಕೂಡ ಜಿಲ್ಲೆಯಲ್ಲಿ ಬಂದ್‍ಗೆ ಕರೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಇಂದಿನಿಂದ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು, ಬಸ್‍ಗಳು ಎಂದಿನಂತೆ ಸಂಚಾರ ಮಾಡಲಿದೆ. ಉದ್ಘಿಗ್ವಗೊಂಡಿದ್ದ ಕನಕಪುರದಲ್ಲಿಯೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂದಿನಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಸಹಜಸ್ಥಿತಿಯತ್ತ ಜನ ಜೀವನ ಮರಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.