Wednesday, January 22, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಎಂದರೆ ಶಿಕ್ಷಕ. ಈ ಕಾರಣಕ್ಕಾಗಿಯೇ ಶಿಕ್ಷಕರು ಹೇಳುವ ಮಾತು ವಿದ್ಯಾರ್ಥಿಗಳಿಗೆ ವೇದವಾಕ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿ ಜೀವನ ಮೌಲ್ಯಗಳನ್ನು ನೀಡಿ ದೇಶಕ್ಕೆ ಕೊಡುಗೆಯಾಗುವಂತೆ ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ತಿಳಿಸಿದರು.

ಅವರು ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ, ವಿವೇಕಾನಂದ ಕಾಲೇಜು ಹಾಗೂ ಐಕ್ಯುಎಸಿ ಘಟಕದ ಆಶ್ರಯದಲ್ಲಿ ನಡೆದ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಕ ಪಠ್ಯ ವಿಷಯದ ಕುರಿತು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತುಕೊಂಡು ಆ ಕುರಿತು ಬೇಕಾದ ಜ್ಞಾನ, ತಿಳಿವಳಿಕೆಯನ್ನು ನೀಡಬೇಕು. ಇದು ವಿದ್ಯಾರ್ಥಿಯ ಜೀವನವನ್ನು ಉಜ್ವಲವನ್ನಾಗಿಸುತ್ತದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಶಿಕ್ಷಣ ಘಟಕದ ಸಂಯೋಜಕ ರಘುರಾಜ ಉಬರಡ್ಕ ಪ್ರಸ್ತಾವನೆಗೈದು, ಶಿಕ್ಷಣ ಎಂಬುದು ನಿತ್ಯ ನಿರಂತರ. ಆದ್ದರಿಂದ ಎಲ್ಲಾ ವಯೋಮಾನದವರು ಒಂದಲ್ಲ ಒಂದುರೀತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಶಿಕ್ಷಕನಿಗೆ ವಯಸ್ಸಾಗುತ್ತಾ ಸಾಗಿದರೂ ವಿದ್ಯಾರ್ಥಿಗಳು ಮಾತ್ರ ಸಮಾನ ವಯಸ್ಸಿನವರೇ ಇರುತ್ತಾರೆ. ಹಾಗಾಗಿ ಆಯಾಯ ವಯೋಮಾನಕ್ಕೆ ತಕ್ಕ ಶಿಕ್ಷಣವನ್ನು ನೀಡುವ ಜವಾಬ್ದಾರಿ ಶಿಕ್ಷಕರಿಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿಯೊಂದು ವಿಷಯದಲ್ಲಿ ಬದಲಾವಣೆಗಳಾಗುತ್ತಿದೆ. ಅದರಂತೆ ಮನುಷ್ಯನ ಹಾವಭಾವವೂ ಬದಲಾಗುತ್ತಿದೆ. ಹಾಗಾಗಿ ಅಧ್ಯಾಪಕ ಬದಲಾದ ಮನಸ್ಥಿತಿಯ ವಿದ್ಯಾರ್ಥಿಗಳ ಜೊತೆಗೆ ವ್ಯವಹರಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು. ಅದರೊಂದಿಗೆ ಶಿಕ್ಷಕ ತೆರೆದ ಮನಸ್ಸಿನಿಂದ ಹೊಸ ವಿಚಾರಗಳನ್ನು ಅರಿತು ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು ಎಂದರು.

ಶಿಕ್ಷಕ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಹ ಪ್ರೀತಿಯ ಗುಣವನ್ನು ಇಟ್ಟುಕೊಂಡರೆ ಮುಂದೆ ಅವರಲ್ಲಿ ರಾಷ್ಟ್ರಪ್ರೇಮ, ಧನಾತ್ಮಕ ವಿಷಯಗಳ ಕುರಿತು ಚಿಂತಿಸುವಂತೆ ಮಾಡುವ ಪ್ರೇರಣೆಯನ್ನು ನೀಡಬಹುದು. ಈ ಮೂಲಕ ಸ್ವಾಭಾವಿಕ ಬದಲಾವಣೆಯನ್ನು ವಿದ್ಯಾರ್ಥಿಗಳಲ್ಲಿ ತಂದು ಸರಿ, ತಪ್ಪುಗಳ ಅರಿವನ್ನು ಮನವರಿಸುವ ಮುಖೇನ ಅವರನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ವಿವಿಧ ಗೋಷ್ಠಿಗಳು
ಪ್ರಥಮ ಗೋಷ್ಠಿಯಲ್ಲಿ ನೈತಿಕ ಶಿಕ್ಷಣ ಎಂಬ ವಿಷಯದ ಕುರಿತು ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜೀತಕಾಮಾನಂದ ಜಿ ಮಹಾರಾಜ್, ನೈತಿಕ ಶಿಕ್ಷಣ ಎನ್ನುವುದು ಪ್ರಾಪಂಚಿಕ ಮನುಷ್ಯ ಜೀವನದಲ್ಲಿ ಇರಲೇಬೇಕಾದ ಒಂದು ವಿಷಯ. ವ್ಯಕ್ತಿಯ ಗುಣ, ನಡತೆಯನ್ನೇ ಮೌಲ್ಯಗಳು ಎನ್ನಬಹುದು. ಈ ಮೂಲಕವೇ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ತಿಳಿಸುವ ಕೆಲಸವನ್ನು ಮಾಡಬೇಕು. ಏಕೆಂದರೆ ಸಣ್ಣ ವಯಸ್ಸಿನಲ್ಲೇ ಮಕ್ಕಳ ಮನಸ್ಸಿಗೆ ಮೌಲ್ಯವೆಂಬ ಬೀಜವನ್ನು ಬಿತ್ತಬೇಕು ಅದು ಅಚ್ಚಳಿಯದೆ ಉಳಿಯುತ್ತದೆ. ಉತ್ತಮ ಗುಣಗಳಿಗೆ ಸಮಾಜ ಬೆಲೆ ಕೊಟ್ಟರೆ ಅದುವೇ ಪ್ರಜ್ಞಾವಂತ ಸಮಾಜ ಎಂದು ಕರೆಸಿಕೊಳ್ಳುತ್ತದೆ ಎಂದು ತಿಳಿಸಿದರು.

ಎರಡನೇ ಹಾಗೂ ಮೂರನೇ ಗೋಷ್ಠಿಯಲ್ಲಿ ‘ಕಾಲೇಜು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ’ ಹಾಗೂ ‘ಪೋಷಕರಾಗಿ ಶಿಕ್ಷಕರು’ ಎಂಬ ವಿಷಯದ ಕುರಿತು ಮಾತನಾಡಿದ ಉಡುಪಿಯ ಎ.ವಿ. ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಶಿಕ್ಷಕರು ವಿದ್ಯಾರ್ಥಿಗಳ ಮನೋವಿಮರ್ಶಕರಾಗಬೇಕು. ವಿದ್ಯಾರ್ಥಿಯ ಸಮಸ್ಯೆಯನ್ನು ಅರಿತು ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾಗುತ್ತದೆ. ಆಗ ವಿದ್ಯಾರ್ಥಿ ತನ್ನ ಸಮಸ್ಯೆಯಿಂದ ಮುಕ್ತಿ ಕಂಡು ಕಲಿಕೆಯಲ್ಲಿ ಹೆಚ್ಚು ಶ್ರದ್ಧೆಯನ್ನು ವಹಿಸಲು ಸಾಧ್ಯ ಎಂದರು. ಇಂದು ಶಿಕ್ಷಣದ ರೀತಿ ಬದಲಾಗಿದೆ ಏಕೆಂದರೆ ಬರೀ ಪಠ್ಯವನ್ನು ತಿಳಿಸುವುದು ಮಾತ್ರವಲ್ಲದೆ ಅದನ್ನು ಹೊರತಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಶ್ರೇಯೋಭಿವೃದ್ಧಿಯ ಕಡೆಗೆ ಗಮನಹರಿಸುವುದು ಆತನ ಕರ್ತವ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳ ದೈಹಿಕ ಆರೋಗ್ಯವನ್ನು ಬಾಹ್ಯವಾಗಿ ನಾವು ಪತ್ತೆಹಚ್ಚಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಆದರೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತು ಕಾಳಜಿವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ಒತ್ತುನೀಡಿ ಆತನ ಪ್ರತಿಯೊಂದು ಸಮಸ್ಯೆಗೆ ಪರಿಹಾರವನ್ನು ನೀಡುವ ಪ್ರಯತ್ನವಾಗಬೇಕು. ಆಗ ಉತ್ತಮ ವ್ಯಕ್ತಿತ್ವವಿರುವ ವಿದ್ಯಾರ್ಥಿ ಸಮಾಜಕ್ಕೆ ಮಾದರಿಯಾಗುತ್ತಾನೆ. ಆದರೆ ಆ ರೀತಿಯ ಬದಲಾವಣೆಯನ್ನು ತರುವ ಕೆಲಸ ಶಿಕ್ಷಕರಿಂದಲೇ ಆಗಬೇಕು ಎಂದು ತಿಳಿಸಿದರು. ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕರು ಮಾತ್ರವಲ್ಲದೆ ಪೆರ್ಲ ನಳಂದ ಪದವಿ ಕಾಲೇಜು, ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಮಾನಸ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ವಿನೂತ ಸ್ವಾಗತಿಸಿದರು, ಜ್ಯೋತಿ ವಂದಿಸಿದರು, ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.