ಪಂಜದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಶೋಧ ಕಾರ್ಯಚರಣೆ ವೇಳೆ ಅಡ್ಡಿಯಾದ ಗಾಳಿ ಸುದ್ದಿ- ಕಹಳೆ ನ್ಯೂಸ್
ಪಂಜ: ಕೂತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡ ಎಂಬವರು ಸೆ.3.ರಂದು ನಾಪತ್ತೆಯಾಗಿದ್ದು ಇಂದು ಇವರ ಮೃತದೇಹ ಪತ್ತೆಯಾಗಿದೆ. ಪಲ್ಲೋಡಿ ಹೊಳೆಯ ನೆರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದ್ದ ಹಿನ್ನಲೆ ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಶೋಧನೆ ನಡೆಸಿದ್ದರು. ಶೇಷಪ್ಪ ಗೌಡರ ನಾಪತ್ತೆ ದಿನದಂದು ಪಲ್ಲೋಡಿ ಸೇತುವೆ ಮೇಲೆ ಶವವೊಂದು ತೇಲಿ ಹೋಗುತಿದ್ದದ್ದನ್ನು ಕಂಡಿದ್ದಾಗಿ ಸೇತುವೆ ಮೇಲೆ ವಾಹನದಲ್ಲಿ ತೆರಳುತಿದ್ದವರು ರಸ್ತೆ ಬದಿಯ ಮಹಿಳೆಯರಲ್ಲಿ ಹೇಳಿಕೊಂಡಿದ್ದರು. ಮರುದಿನ ಪುಳಿಕುಕ್ಕು ಸೇತುವೆ ಮೇಲೆ ಕರ್ತವ್ಯ ನಿರತ ಗ್ರಹರಕ್ಷಕದಳದ ಸಿಬ್ಬಂದಿಯೂ ಶವ ಹೊಳೆಯಲ್ಲಿ ತೇಲಿ ಹೋಗುತ್ತಿದ್ದದನ್ನು ಕಂಡಿದ್ದಾಗಿ ಮಾಹಿತಿ ನೀಡಿದ್ದರು. ಈ ನಡುವೆ ಕೆಲವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಗೌಡರ ಶವ ದೊರೆತಿದೆ ಎಂದು ಸುಳ್ಳು ಕರೆಗಳನ್ನು ಮಾಡಿ ತಪ್ಪು ಮಾಹಿತಿ ನೀಡುತಿದ್ದರು, ಇದರಿಂದ ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿದ ಅಧಿಕಾರಿಗಳು ಗೊಂದಲಕ್ಕೆ ಒಳಗಾದರು. ತಪ್ಪು ಮಾಹಿತಿಗಳಿಂದ ಆಧಿಕಾರಿಗಳು, ಕಾರ್ಯಾಚರಣೆಯ ತಂಡದವರು ಸಂಕಷ್ಟಕ್ಕೆ ಒಳಗಾದರು.
ಮೊಸಳೆಗಳ ಕಾಟ
ಮಳೆ ಮತ್ತು ಪ್ರವಾಹದಿಂದ ಅಗ್ನಿಶಾಮಕದಳ ಮತ್ತು ಎನ್‍ಡಿಆರ್‍ಎಪ್ ತಂಡಗಳಿಗೆ ಶೋಧ ಕಾರ್ಯಕ್ಕೆ ಅಡ್ಡಿಯಾಯಿತು. ನೀರಿನ ಸೆಳೆತ ಹೆಚ್ಚಿದ್ದರಿಂದ ಮತ್ತು ಕಸಗಳು ಇರುವುದರಿಂದಲೂ ಬೋಟಿಗೆ ಸಮಸ್ಯೆಯಾಯಿತು. ಈ ನಡುವೆ ಕಾರ್ಯಾಚರಣೆಗೆ ತೆರಳಿದ್ದ ಎನ್‍ಡಿಆರ್‍ಎಪ್ ತಂಡಕ್ಕೆ ಹತ್ತಕ್ಕೂ ಅಧಿಕ ಮೊಸಳೆಗಳು ಕಂಡು ಬಂದಿದ್ದಾಗಿ ತಂಡದವರು ಮಾಹಿತಿ ನೀಡಿದರು.
ಸುಬ್ರಹ್ಮಣ್ಯ ಠಾಣೆಯ ಎಎಸ್‍ಐ ಚಂದಪ್ಪ ಗೌಡ ಮತ್ತು ಸಿಬಂದಿಗಳು, ಪಂಜ ಕಂದಾಯ ನಿರೀಕ್ಷಕ ಶಂಕರ್ ಎಂ.ಎಲ್, ಕಂದಾಯ ಅಧಿಕಾರಿಗಳಾದ ಎಲ್‍ಎಂ ತುಕರಾಮ್, ದೀಕ್ಷಿತ್ ಮತ್ತಿತರರು,ಬ ತಾ.ಪಂ ಸದಸ್ಯ ಅಬ್ದುಲ್ ಗಪೂರ್, ಪಿಡಿಒ ಪುರುಷೋತ್ತಮ ಮಣಿಯಾನಮನೆ, ಗೌಡರ ಕುಟುಂಬ ಸದಸ್ಯರು, ಊರವರು ಉಪಸ್ಥಿತರಿದ್ದರು, ಕೊಳೆತ ಸ್ಥಿತಿಯಲ್ಲಿದ್ದ ಶವದ ಮಹಜರು ನಡೆಸಿದ ಬಳಿಕ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.