ಪುತ್ತೂರು : ರಾಷ್ಟ್ರೀಯ ದಿನಗಳನ್ನು ಆಚರಿಸುವಾಗ ಕಾಗದ ಮತ್ತು ಪ್ಲಾಸ್ಟಿಕ್‍ಗಳಿಂದ ತಯಾರಿಸುವ ಧ್ವಜಗಳ ಮೂಲಕ ರಾಷ್ಟ್ರದ ತ್ರಿವರ್ಣ ಧ್ವಜಕ್ಕೆ ಅಪಚಾರವಾಗುವುದನ್ನು ತಡೆಯಲು ಪುತ್ತೂರು ತಹಶೀಲ್ದಾರರು ಹಾಗೂ ಪೊಲೀಸ್ ನಿರೀಕ್ಷಕರಿಗೆ ಮನವಿ ನೀಡಲಾಯಿತು. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಗಳನ್ನು ಅದ್ಧೂರಿಯಿಂದ ಆಚರಿಸಲು ಅತ್ಯುತ್ಸಾಹದಿಂದ ರಾಷ್ಟ್ರಾದ್ಯಂತ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಇಂತಹ ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಸಾರ್ವಜನಿಕರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾಗರಿಕರಲ್ಲಿ ವಿನಂತಿ ಮಾಡುತ್ತದೆ.
ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಗಮನಾರ್ಹ ಅಂಶವೇನೆಂದರೆ, ಮಕ್ಕಳಿಗೆ ವಿತರಿಸುವ ಕಾಗದದ ಮತ್ತು ಪ್ಲಾಸ್ಟಿಕ್ ಧ್ವಜಗಳು ಕಾರ್ಯಕ್ರಮದ ಬಳಿಕ ಹರಿದ ಸ್ಥಿತಿಯಲ್ಲಿ ಸಾರ್ವಜನಿಕ ರಸ್ತೆ, ಚರಂಡಿಗಳಲ್ಲಿ ಅನಾಥವಾಗಿ ಬಿದ್ದಿರುವುದನ್ನು ನೋಡಬೇಕಾಗಿರುವುದು ಅತ್ಯಂತ ಖೇದಕರವಾಗಿದೆ.
ಕಳೆದ 15 ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಸರಕಾರ, ಆಡಳಿತ ನಡೆಸುವ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು ಮುಂತಾದವರಿಗೆ ರಾಷ್ಟ್ರಧ್ವಜಕ್ಕಾಗುವ ಅಪಚಾರವನ್ನು ತಡೆಗಟ್ಟುವಂತೆ ಮನವಿಗಳನ್ನು ನೀಡುವುದರ ಮೂಲಕ ಒತ್ತಾಯಿಸುತ್ತಿದೆ. ಅಂತೆಯೇ, ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟಿ, ರಾಷ್ಟ್ರಭಕ್ತಿಯನ್ನು ಸಾರ್ವಜನಿಕರಲ್ಲಿ ಜಾಗೃತಗೊಳಿಸಲು ಪತ್ರಿಕಾ ಗೋಷ್ಠಿಗಳು, ಫ್ಲೆಕ್ಸ್ ಪ್ರದರ್ಶನ, ಕರಪತ್ರಗಳ ವಿತರಣೆ, ಶಿಕ್ಷಣ ಸಂಸ್ಥೆಗಳಲ್ಲಿ ಪ್ರವಚನಗಳು, ರಸಪ್ರಶ್ನೆ ಕಾರ್ಯಕ್ರಮಗಳು, ಅಂತರ್ಜಾಲದಲ್ಲಿ ಪ್ರಕಟಣೆ ಇಂತಹ ಹಲವಾರು ಮಾಧ್ಯಮಗಳ ಮೂಲಕ ಪ್ರಯತ್ನಗಳನ್ನು ಮಾಡುತ್ತಿದೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವ ಬಗ್ಗೆ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಬೇಕೆಂದು ಸಮಿತಿಯು ಸರಕಾರವನ್ನು ವಿನಂತಿಸುವುದರೊಂದಿಗೆ ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟುವ ಈ ಚಳವಳಿಯಲ್ಲಿ ಎಲ್ಲಾ ನಾಗರಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕೋರಲಾಗಿದೆ.
ಮನವಿ ನೀಡುವ ವೇಳೆ ಶ್ರೀ. ಸತೀಶ್ ಭಂಡಾರಿ ಪಡೀಲ್, ಶ್ರೀ. ಕೃಷ್ಣ ಕುಮಾರ್ ಶರ್ಮ, ಶ್ರೀ. ನಾರಾಯಣ ಶರ್ಮ, ಶ್ರೀ. ಚಂದ್ರಶೇಖರ್, ಶ್ರೀ. ದಯಾನಂದ್, ಶ್ರೀ. ರಮೇಶ ಉಪಸ್ಥಿತರಿದ್ದರು.
ವರದಿ : ಕೇಶವ ಗೌಡ