ಬೆಂಗಳೂರು : ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ವರುಣ ಮತ್ತೆ ಗುಡುಗುತ್ತಿದ್ದಾನೆ. ಕಳೆದ ತಿಂಗಳ ಮೊದಲ ವಾರದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಶತಮಾನದ ಪ್ರವಾಹ ಸೃಷ್ಟಿಸಿ ಸಾಕಷ್ಟು ಜೀವ ಮತ್ತು ಆಸ್ತಿ ಹಾನಿಯಾಗಿದ್ದ ಕಹಿ ಗಳಿಗೆಗಳನ್ನು ಮರೆಯುವ ಮುನ್ನವೇ ಮತ್ತೆ ಅಂಥದ್ದೇ ಸ್ಥಿತಿ ಎದುರಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಉತ್ತರ ಕರ್ನಾಟಕಕ್ಕೆ ನೆರೆಯ ಭೀತಿ ಆವರಿಸಿದ್ದು, ಮಹಾರಾಷ್ಟ್ರ ಸೇರಿದಂತೆ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಕಾಳಿ, ಶರಾವತಿ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಕೃಷ್ಣರಾಜಸಾಗರ ಆಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ ಕೂಡ ಅಷ್ಟೇ ಇದೆ. ಕಳೆದ ವರ್ಷ ಈ ದಿನ 124.32 ಅಡಿ ನೀರು ಶೇಖರವಾಗಿತ್ತು.
ಸದ್ಯ ಡ್ಯಾಂನಲ್ಲಿ 49.452 ಟಿಎಂಸಿ ನೀರಿಗೆ ಅವಕಾಶವಿದ್ದು, 41.073 ಟಿಎಂಸಿ ನೀರು ಸಂಗ್ರಹವಾಗಿದೆ. ನೀರಿನ ಒಳಹರಿವು 55774 ಕ್ಯೂಸೆಕ್ಸ್ ಆಗಿದ್ದು, ಹೊರಹರಿವು 53062 ಕ್ಯೂಸೆಕ್ ಆಗಿದೆ.