ಹುಬ್ಬಳ್ಳಿ : ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ನಿದ್ದೆ ಮಾಡುತ್ತಿದ್ದರು. ಈಗ ಅಧಿಕಾರದಲ್ಲಿಲ್ಲ ಹಾಗಾಗಿ ಕನಸು ಕಾಣುತ್ತಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಕನಸು ನನಸಾಗಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಅದು ಇರುವುದು ಮಾಧ್ಯಮಗಳಲ್ಲಿ. ಸಚಿವ ಆರ್. ಅಶೋಕ್ ಅವರ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ನಿನ್ನೆಯ ಸಭೆಗೆ ಅವರು ಗೈರಾಗಿದ್ದರು. ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕನಸು ಕಾಣುತ್ತಿದ್ದಾರೆ. ಈಗಲೂ ಅವರ ಕನಸು ನನಸಾಗುವುದಿಲ್ಲ ಎಂದು ದೂರಿದರು.
ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಮೂಲಕ ಬಿಜೆಪಿ ದ್ವೇಷದ ರಾಜಕಾರಣದಲ್ಲಿ ಯಾವುದೇ ಹುರುಳಿಲ್ಲ. ಸಿಬಿಐ, ಐಟಿ, ಇಡಿಗಳು ಬಿಜೆಪಿ ನಿರ್ಮಾಣ ಮಾಡಿದ ಸಂಸ್ಥೆಗಳಲ್ಲ.
ಅವರ ಮೇಲೆ ಆರೋಪವಿದೆ ಕಾನೂನು ಹೋರಾಟ ಮಾಡಿ ಹೊರಬರಲಿ. ಪ್ರಧಾನಿ ನರೇದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ಆರೋಪ ಬಂದಾಗ ಕಾನೂನು ಹೋರಾಟ ಮಾಡಿ ಹೊರಬಂದಿದ್ದಾರೆ. ಈ ಹಿಂದೆ ಕಾಂಗ್ರೆಸ್‍ನವರು ಮಾಡಿದ್ದು ದ್ವೇಷದ ರಾಜಕಾರಣವಾ? ನ್ಯಾಯಾಲಯ, ಕಾನೂನು ಪ್ರಕಾರ ಎಲ್ಲವೂ ನಡೆಯುತ್ತೆ ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಒಳ್ಳೆಯ ಅಧಿಕಾರಿ ಇದ್ದರು. ಅವರ ವೈಯಕ್ತಿಕ ಬೇರೆ ಬೇರೆ ಕಾರಣಗಳು, ವಿಚಾರಗಳು ಇರಬಹುದು. ಯಾವುದೇ ಉಹಾಪೋಹಗಳು ಬೇಡ. ಈ ಹಿಂದೆ ಅಣ್ಣಾಮಲೈ ಕೂಡಾ ರಾಜೀನಾಮೆ ನೀಡಿದ್ದರು ಇವಾಗ ರಾಜಕೀಯ ಸೇರಿದ್ದಾರೆ. ಇವರು ಮುಂದೆ ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದರು.