ನವದೆಹಲಿ: ಉತ್ಪಾದಿತ ವಾಹನಗಳ ಮಾರಾಟ ಆಮೆಗತಿಯಲ್ಲಿ ಸಾಗಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ರಿಯಾಯ್ತಿ ದರ ಘೋಷಣೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಮಾರುತಿ, ಟೊಯೊಟಾ, ಹ್ಯುಂಡೈ, ಹೋಂಡಾದಂಥ ಪ್ರತಿಷ್ಠಿತ ಕಂಪನಿಗಳು ಗೋಡೌನ್‌ನಲ್ಲಿ ನಿಂತಿರುವ ಕಾರುಗಳ ಮಾರಾಟಕ್ಕೆ ತೀವ್ರ ಸ್ಪರ್ಧೆಗಿಳಿದಿವೆ. ಇದರಿಂದಾಗಿ ಕಾರು ಖರೀದಿಗೆ ಇದು ಸಕಾಲ ಎಂಬ ವಾತಾವರಣ ಸೃಷ್ಟಿಸಲಾಗುತ್ತಿದೆ.
2020ರ ಏಪ್ರಿಲ್‌ನಿಂದ ಬದಲಾದ ಇಂಧನ ಬಳಕೆ ನಿಯಮಗಳು ಜಾರಿಗೆ ಬರುವುದರಿಂದ ಈಗ ಗೋಡೌನ್‌ನಲ್ಲಿರುವ ವಾಹನಗಳನ್ನು ಮಾರಾಟ ಮಾಡಿಕೊಳ್ಳುವ ಅನಿವಾರ್ಯತೆ ವಾಹನ ಕಂಪನಿಗಳಿಗಿದೆ. ಹೀಗಾಗಿ ಬಹುತೇಕ ಕಂಪನಿಗಳು ಗ್ರಾಹಕನಿಗೆ ಭರ್ಜರಿ ಆಫರ್ ಕೊಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ.
ದೇಶದ ನಂ.1 ವಾಹನ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ 30,000ದಿಂದ 1.2 ಲಕ್ಷ ರು.ತನಕ ಮುಖ ಬೆಲೆಯ ಮೇಲೆ ಕಡಿತಗೊಳಿಸಿ ಮಾರಾಟಕ್ಕೆ ಮುಂದಾಗಿದೆ. ಆಲ್ಟೋ ಎಂಟ್ರಿ ಮಾಡೆಲ್‌ಗಳ ಬೆಲೆಯನ್ನೇ 18-20% ಕಡಿತಗೊಳಿಸಿದೆ. ಅದೇ ಪ್ರಕಾರ ಹ್ಯುಂಡೈ ಕೂಡ ಗ್ರಾಂಡ್ ಐ10 ಕಾರಿನ ಮೇಲೆ ಶೇ.15ರಷ್ಟುಆಫರ್ ನೀಡುತ್ತಿದೆ. ಹೋಂಡಾ 42,000ದಿಂದ 4,00,000ದಷ್ಟುಕಡಿತಗೊಳಿಸಿದ್ದು, ಸಿಆರ್‌ವಿ ಮತ್ತು ಬಿಆರ್‌ವಿ ಕಾರುಗಳನ್ನು ಭಾರಿ ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ.
ಯಾವ ಕಾರುಗಳು ಬೆಲೆಯಲ್ಲಿ ಕಡಿತ?
ಸದ್ಯಕ್ಕೆ ಕಂಪನಿಗಳು ಘೋಷಿಸಿಕೊಂಡಿರುವ ಪ್ರಕಾರ ಹೋಂಡಾ ಸಿಆರ್‌ವಿ, ಬಿಆರ್‌ವಿ ಕಾರುಗಳ ಮೇಲೆ ಕ್ರಮವಾಗಿ 4 ಲಕ್ಷ ಮತ್ತು 1.10 ಲಕ್ಷ ರು. ಕಡಿತಗೊಳಿಸಲಾಗಿದೆ. ಟೊಯೊಟಾ ಯಾರೀಸ್ ಸೆಡಾನ್ ಕಾರಿನ ಮೇಲೆ 2.50 ಲಕ್ಷ ರು. ಕಡಿತಗೊಳಿಸಲಾಗಿದೆ. ಹ್ಯೂಂಡೈ ಗ್ರಾಂಡ್ ಐ10 ಮತ್ತು ಸ್ಯಾಂಟ್ರೋ ಕಾರಿನ ಮೇಲೆ ಕ್ರಮವಾಗಿ 85 ಸಾವಿರ ಮತ್ತು 40 ಸಾವಿರ ಕಡಿತಗೊಳಿಸಲಾಗಿದೆ. ಮಾರುತು ಸುಝುಕಿ ಕಾರುಗಳಾದ ಎಸ್.ಕ್ರಾಸ್ ಮೇಲೆ 1.12 ಲಕ್ಷ ರು, ವಿತಾರಾ ಬ್ರೆಝಾ ಮೇಲೆ 1.01 ಲಕ್ಷ ರು. ಕಡಿತಗೊಳಿಸಲಾಗಿದೆ.