ಹುಬ್ಬಳ್ಳಿ: ಜಾರಿ ನಿರ್ದೇಶನಾಲಯದಿಂದ ಡಿಕೆಶಿ ಬಂಧನ, ವಿನಯ ಕುಲಕರ್ಣಿ, ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ರಾಜಕೀಯ ದ್ವೇಷ ಎಂಬ ಪ್ರತಿಪಕ್ಷದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು, ಸಿಬಿಐ ಬಿಜೆಪಿ ನಿರ್ಮಾಣ ಮಾಡಿರುವ ಸಂಸ್ಥೆಯಲ್ಲ, ಐಟಿ, ಇಡಿ ಸಂಸ್ಥೆಗಳು ಬಿಜೆಪಿ ಸರ್ಕಾರ ಬಂದ ಬಳಿಕ ರಚನೆಯಾಗಿಲ್ಲ ಎಂದು ಹೇಳಿದ್ದಾರೆ.
ಆರೋಪ ಬಂದ ತಕ್ಷಣ ಅಧಿಕಾರದಲ್ಲಿರುವ ಪಕ್ಷಗಳ ಮೇಲೆ ದೂರುವುದು ಸರಿಯಲ್ಲ. ಹಿಂದಿನ ಕಾಲಘಟ್ಟದಲ್ಲಿ ದ್ವೇಷದ ರಾಜಕಾರಣ ಆಗಿರಬಹುದು, ಅದನ್ನೇ ಕಾಂಗ್ರೆಸ್ಸಿನವರೀಗ ಹೇಳುತ್ತಿದ್ದಾರೆ ಎಂದು ಶನಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾನೂನು ಅದರದ್ದೇ ಆದ ಕಾರ್ಯ ಮಾಡುತ್ತಿದೆ. ತನಿಖಾ ಸಂಸ್ಥೆಗಳು ಮೊದಲಿನಿಂದಲೂ ಇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೇಲೂ ಆರೋಪಗಳು ಬಂದಿದ್ದವು. ಅವರು ಕಾನೂನು ಹೋರಾಟ ಮಾಡಿ ಹೊರಬಂದಿದ್ದಾರೆ. ನ್ಯಾಯಾಲಯ, ಕಾನೂನು ಪ್ರಕಾರ ಹೋರಾಟ ಮಾಡಬೇಕಾಗುತ್ತದೆ. ಅದು ಬಿಟ್ಟು ರಸ್ತೆ ಹೋರಾಟ ಮಾಡುವುದು ಎಷ್ಟುಸರಿ? ಇವರ ಕಾಲದಲ್ಲಿ ದ್ವೇಷ್ಥದ ರಾಜಕಾರಣ ನಡೆದಿರಬಹುದು ಎಂದರು.