ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿದ್ದು ಮುಂದಿನ ದಿನಗಳಲ್ಲಿ ಹತ್ತು ಮಂದಿ ಉಪಮುಖ್ಯಮಂತ್ರಿಗಳನ್ನೂ ನೇಮಿಸಿದರೂ ಯಾವುದೇ ಆಶ್ಚರ್ಯ ಇಲ್ಲ ಎಂದು ಜೆಡಿಎಸ್ ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನಮಾನಕ್ಕೆ ಯಾವುದೇ ಸಂವಿಧಾನಾತ್ಮಕ ಮಹತ್ವ ಇಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಿ. ಸೆ.11ರಂದು ಸುಪ್ರಿಂಕೋರ್ಟ್ ಮುಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದೆ ಏನಾಗುತ್ತದೋ? ನೋಡೋಣ ಎಂದ ಅವರು, ಆದರೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ಘೋಷಿಸಿದ್ದೇನೆ. ತಮ್ಮ ಮಗ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾನೆ. ಪಕ್ಷ ಟಿಕೆಟ್ ನೀಡಿದರೆ ನೋಡೋಣ ಎಂದು ಉತ್ತರಿಸಿದರು.