ಪುರುಷ ಪ್ರಧಾನ ಸಮಾಜದಲ್ಲಿ ಈಗ ಮಹಿಳೆ ಕೂಡ ಅಷ್ಟೇ ಶಕ್ತಿಯುತಳು ಅನ್ನೋದನ್ನು ತೋರಿಸಿದ್ದೇ ಅನವರತ ಹಾಗೂ ಸತತ ಸೇವೆ ನೀಡುವಂತ ಸಂಘ ಸಂಸ್ಥೆಗಳು. ಮಹಿಳೆಯರು ಯಾವುದರಲ್ಲೂ ಕಮ್ಮಿ ಇಲ್ಲಾ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಡ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಅಡುಗೆ ಮನೆಗೆ ಸೀಮಿತ ಅನ್ನುವಂತಿದ್ದ ಕಾಲ ದೂರವಾಗಿದೆ. ಹಾಗೆ ಹೊರಗಿನ ವ್ಯವಹಾರವನ್ನು ನಾರಿಯರೂ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಬಲ್ಲರು ಅನ್ನೋದಕ್ಕೆ ಅಮೃತವಾಹಿನಿ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವೇ ಸಾಕ್ಷಿ.
ತೀರಾ ಗ್ರಾಮೀಣ ಪ್ರದೇಶವಾದ ಬಂದಾರಿನಲ್ಲಿ 1999ರಲ್ಲಿ ಶ್ರೀಯುತ ಲಕ್ಷ್ಮಣ ಗೌಡರ ಸತತ ಪ್ರಯತ್ನದೊಂದಿಗೆ ಊರಿನ ಹತ್ತು ಸಮಸ್ತರೊಂದಿಗೆ ಸುಮಾರು 75 ಸದಸ್ಯರಿಂದ ಪ್ರಾರಂಭವಾದ ಸಂಸ್ಥೆ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ. ತನ್ನ ಅವಿರತ ಪ್ರಯತ್ನದಿಂದ ಇದೀಗ ಸತತವಾಗಿ ನಾಲ್ಕೈದು ವರ್ಷಗಳಿಂದ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಪ್ರಸ್ತುತ ಸಂಘವು ಬಂದಾರು ಮತ್ತು ಮೊಗ್ರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು 2018 -19ನೇ ಸಾಲಿನಲ್ಲಿ ಸುಮಾರು 9,47,762 ಲೀ ಹಾಲನ್ನು ಸಂಗ್ರಹಣೆ ಮಾಡಿದೆ. ದಿನ ಒಂದಕ್ಕೆ ಸರಾಸರಿ 2,600 ಲೀ ಹಾಲು ಸಂಗ್ರಹಣೆ ಮಾಡುತ್ತಿದ್ದು, ಸಂಘವು ಸುಸಜ್ಜಿತವಾದ ಕಟ್ಟಡ ಹಾಗೂ ಸ್ವಯಂಚಾಲಿತ ಹಾಲು ಶೇಖರಣಾ ಘಟಕವನ್ನು ಹೊಂದಿದೆ.
ಸಂಘವು 2014 -15 ರಿಂದ 2018-19ರ ವರೆಗೆ ಸತತವಾಗಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಅತ್ಯುತ್ತಮ ಮಹಿಳಾ ಸಂಘ ಸಾಧನಾ ಪ್ರಶಸ್ತಿ ಮತ್ತು 2016 -17 ಅತ್ಯುತ್ತಮ ಬಿಎಮ್‍ಸಿ ನಿರ್ವವಹಣೆ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್ ಒಕ್ಕೂಟದಲ್ಲಿ 2011-12ರಲ್ಲಿ ಹಾಗೂ 2018-2019ರಲ್ಲಿ ಅತ್ಯುತ್ತಮ ಮಹಿಳಾ ಸಂಘ ಸಾಧನಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಈ ಸಂಘವು ಕೇವಲ ಹಾಲು ಸಂಗ್ರಹಕ್ಕಷ್ಟೆ ಸೀಮಿತವಾಗಿರದೆ, ತನ್ನ ಕಾರ್ಯ ವ್ಯಾಪ್ತಿಯನ್ನು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಹೆಮ್ಮೆಯ ಸಂಘ ಎನಿಸಿದೆ. ಬಂದಾರು ಹಿರಿಯ ಪ್ರಾಥಮಿಕ ಶಾಲೆಯಿಂದ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 8 ವಿದ್ಯಾರ್ಥಿನಿಯರಿಗೆ ತಲಾ 8,000 ರೂಪಾಯಿಗಳ ಪ್ರೋತ್ಸಾಹ ಧನವನ್ನು ಕಳೆದ ತಿಂಗಳು ಆಗಸ್ಟ್ 26ರಂದು ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮಹಾಸಭೆಯ ಮೂಲಕ ಕೊಡಿಸುವಲ್ಲಿ ಸಂಘವು ಮಹತ್ವದ ಪಾತ್ರ ವಹಿಸಿದೆ. ನಿಜಕ್ಕೂ ಸಂಘದ ಈ ಕಾರ್ಯ ಎಲ್ಲರೂ ಮೆಚ್ಚುವಂತದ್ದು.
3 ಸ್ವಸಹಾಯ ಗುಂಪುಗಳನ್ನು ಹೊಂದಿರುವ ಈ ಸಂಘ ಮಹಿಳೆಯರಿಗಾಗಿ ಅಲ್ಪ ಪ್ರಮಾಣದ ಸಾಲ ಸೌಲಭ್ಯ, ಹಣ ಹೂಡಿಕೆ ಮಾಡಿ ಇಲ್ಲಿನ ಸ್ಥಳೀಯ ಮಹಿಳೆಯರ ಆಧಾರಸ್ತಂಭವಾಗಿದೆ. ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರಿಂದ ಮಹಿಳೆಯರಿಗಾಗಿ ಹಾಗೂ ಮಹಿಳೆಯರಿಗೋಸ್ಕರ ಕಾರ್ಯ ನಿರ್ವಹಿಸುತ್ತಿರುವ ಈ ಮಹಿಳಾ ಮಣಿಗಳ ಸಂಘದ ಈ ಗಣನೀಯ ಸಾಧನೆ ಸಜ್ಜನ ಗ್ರಾಮಸ್ಥರ ಪ್ರಶಂಸೆಗೆ ಅರ್ಹವಾಗಿದೆ.