ಬಂಟ್ವಾಳ: ಬೆಂಗಳೂರು ಲಹರಿ ಆಡಿಯೋ ಸಂಸ್ಥೆ, ಹಿರಿಯ ಸಾಹಿತಿ ದಿ| ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಭಾವಗೀತೆಯನ್ನು, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಸಂದರ್ಭ ಹಾಡಿಗೆ ಮೊದಲು ಅಣ್ಣಪ್ಪ ಸ್ವಾಮಿ ದೈವವು ಅಮ್ಟಾಡಿ ಗ್ರಾಮಕ್ಕೆ ಹೇಗೆ ಬಂತು ಎಂಬುದಕ್ಕೆ ತಪ್ಪು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದನ್ನು ಸರಿಪಡಿಸುವಂತೆ ಅಮ್ಟಾಡಿ ಮಂಗ್ಲಿಮಾರ್‍ನ ಪರಿವಾರ ದೈವಗಳ ದೇವತಾ ಆರಾಧಾನಾ ಸಮಿತಿ ಆಗ್ರಹಿಸಿದೆ. ಆರಾಧಾನಾ ಸಮಿತಿಯ ಪ್ರೇಮನಾಥ್ ಕೆ. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಣ್ಣಪ್ಪ ಸ್ವಾಮಿ ದೈವವು ಕುಡುಮದಿಂದ ಅಮ್ಟಾಡಿ ಅಕ್ಕೇರಿಪಾದೆಗೆ ಬಂದು ನೆಲೆ ನಿಂತು ಮುಂದೆ ನೇಮೋತ್ಸವಕ್ಕಾಗಿ ಮಂಗ್ಲಿಮಾರ್ ಸ್ಥಳವನ್ನು ಆಯ್ಕೆ ಮಾಡಿದೆ ಎಂದು ದಿ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಮಂಗಳತಿಮರು ಪುಸ್ತಕದಲ್ಲಿ ಉಲ್ಲೇಖವಿದ್ದು, ಇದು ಸರಿಯಾದ ವಿಚಾರವಾಗಿದೆ. ಜತೆಗೆ ದೈವ ಪಾಡ್ದನದಲ್ಲೂ ಇದೇ ವಿಚಾರ ಉಲ್ಲೇಖವಾಗಿದೆ.
ಭಾವಗೀತೆಯ ಪ್ರಾರಂಭದಲ್ಲಿ ಉಲ್ಲೇಖವಾಗಿರುವ ವಿಚಾರವನ್ನು ಖಂಡಿಸಿ ಶ್ರೀ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಮತ್ತು ಧೂಮಾವತಿ ಬಂಟ ಮತ್ತು ಕಲಾಯಿ ದುರ್ಗಾಪರಮೇಶ್ವರೀ, ಮಹಾಮ್ಮಾಯಿ ಪರಿವಾರ ದೈವಗಳ ದೇವತಾ ಆರಾಧನಾ ಸಮಿತಿಯ ವತಿಯಿಂದ ಗ್ರಾಮಸ್ಥರೆಲ್ಲಾ ಸೇರಿ ಸರಿಪಡಿಸುವಂತೆ ಆಡಿಯೋ ಸಂಸ್ಥೆಯನ್ನು, ಒತ್ತಾಯಿಸುವ ಕುರಿತು ನಿರ್ಣಯ ಕೈಗೂಳ್ಳಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಆರಾಧನಾ ಸಮಿತಿಯ ಎಲೆದಾರಬಾವ ನರಸಿಂಹ ಹೊಳ್ಳ, ಕೈಯೋಳಿಮಾರ್ ಉಮೇಶ್ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಪುಷ್ಪರಾಜ್ ಶೆಟ್ಟಿ ಬಡಾಜೆ, ಲೋಕೇಶ್ ಕಿನ್ನಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.