Monday, January 20, 2025
ಸುದ್ದಿ

ವಶದಲ್ಲಿದ್ದ ಉಗ್ರ ಅಜರ್‍ ನನ್ನು ರಹಸ್ಯವಾಗಿ ಹೊರಬಿಟ್ಟ ಪಾಕ್; ಭಾರತ ಮೇಲೆ ದಾಳಿಗೆ ಸಿದ್ಧತೆ ಆರಂಭಿಸಲು ಸೂಚನೆ – ಕಹಳೆ ನ್ಯೂಸ್

ನವದೆಹಲಿ : 40 ಸಿಆರ್‍ ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿ ಪ್ರಕರಣದ ರೂವಾರಿ, ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್‍ ನನ್ನು ಇಷ್ಟುದಿನಗಳ ಕಾಲ ತನ್ನ ವಶದಲ್ಲಿಟ್ಟುಕೊಂಡಿದ್ದ ಪಾಕಿಸ್ತಾನ ಈಗ ರಹಸ್ಯವಾಗಿ ಬಿಡುಗಡೆ ಮಾಡಿದೆ. ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಗೊಳಿಸಿದ್ದರಿಂದ ಕ್ರುದ್ಧವಾಗಿರುವ ಪಾಕಿಸ್ತಾನ, ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಯೋತ್ಪಾದಕ ದಾಳಿಗೆ ಸಜ್ಜಾಗುವಂತೆ ಅಜರ್‍ಗೆ ಸೂಚನೆ ನೀಡಿದೆ ಎಂದು ವರದಿಗಳು ಹೇಳಿವೆ.

ಸಿಯಾಲ್‍ಕೋಟ್- ಜಮ್ಮು ಹಾಗೂ ರಾಜಸ್ಥಾನ ವಲಯಗಳಲ್ಲಿ ಮುಂಬರುವ ದಿನಗಳಲ್ಲಿ ಘೋರ ದಾಳಿಯನ್ನು ನಡೆಸಲು ಪಾಕಿಸ್ತಾನ ಯೋಜನೆ ರೂಪಿಸುತ್ತಿದೆ. ಇದಕ್ಕೆ ಇಂಬು ನೀಡುವಂತೆ, ರಾಜಸ್ಥಾನದ ಗಡಿಯಿಂದಾಚೆ ಭಾರಿ ಪ್ರಮಾಣದ ಪಾಕಿಸ್ತಾನ ಯೋಧರು ಕಂಡುಬರುತ್ತಿದ್ದಾರೆ ಎಂದು ಗುಪ್ತಚರ ದಳದಿಂದ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ ಸಮಸ್ಯೆ ಉಂಟು ಮಾಡಲು ಪಾಕಿಸ್ತಾನ ಯತ್ನಿಸುತ್ತಿದೆ. ಈಗಾಗಲೇ ಗಡಿಯಿಂದಾಚೆ 230 ಉಗ್ರರನ್ನು ಗುರುತಿಸಲಾಗಿದೆ ಎಂದು ಶನಿವಾರವಷ್ಟೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಉಗ್ರ ಅಜರ್‍ ನನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದು ಶಂಕೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಇದೇ ವಾರ ಸಭೆ ಸೇರುತ್ತಿದೆ. ಮಾಸಾಂತ್ಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆಯಲಿದೆ. ಈ ಎರಡೂ ಜಾಗತಿಕ ವೇದಿಕೆಗಳಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದು ಪಾಕಿಸ್ತಾನ ಉದ್ದೇಶ. ಕಾಶ್ಮೀರದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ಭಯೋತ್ಪಾದಕರ ನೆರವಿನಿಂದ ಮಾಡಿಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆಯಲು ಆ ದೇಶ ಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತಕ್ಕೆ ಸಾಧ್ಯವಿರುವಷ್ಟು ಗರಿಷ್ಠ ಪ್ರಮಾಣದ ಪ್ರತಿಕ್ರಿಯೆ ನೀಡಲಾಗುವುದು ಎಂದು ಕಳೆದ ಶುಕ್ರವಾರವಷ್ಟೇ ಬೆದರಿಕೆಯೊಡ್ಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಆನಂತರ ಯಾವುದೇ ರೀತಿಯ ವಿಕೋಪ ಸಂಭವಿಸಿದರೆ ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯವೇ ಕಾರಣ ಎಂದು ನುಡಿದಿದ್ದರು. ತನ್ಮೂಲಕ ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಪರೋಕ್ಷ ಮನವಿ ಮಾಡಿದ್ದರು. ಅವರ ಈ ಬೇಡಿಕೆಗೆ ಯಾವುದೇ ದೇಶವೂ ಕ್ಯಾರೇ ಎಂದಿರಲಿಲ್ಲ.