ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನಿನಲ್ಲಿ 3 ಚಿರತೆಗಳ ಮೃತದೇಹ ಪತ್ತೆಯಾಗಿವೆ. 10 ವರ್ಷದ ಹೆಣ್ಣು ಚಿರತೆ, 8 ತಿಂಗಳ 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ.
ಹಲ್ಲರೆ ಗ್ರಾಮದ ರೈತ ಚೆನ್ನಬಸಪ್ಪ ಜಮೀನಿನಲ್ಲಿ ಈ ಚಿರತೆಗಳ ಮೃತದೇಹ ಮತ್ತೆಯಾಗಿವೆ. ವಿಷದ ಆಹಾರ ಸೇವಿಸಿ ಈ ಮೂರು ಚಿರತೆಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆರ್‍ಎಫ್‍ಓ ಲೋಕೇಶ್ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಯಿಗಳ ಹಾವಳಿ ತಪ್ಪಿಸಲು ಜಮೀನಿನಲ್ಲಿ ವಿಷಾಹಾರ ಇಟ್ಟಿದ್ದರು ಎನ್ನಲಾಗಿದೆ. ಆ ವಿಷಾಹಾರ ಸೇವಿಸಿ ಸತ್ತ ನಾಯಿಯನ್ನು ಈ ಚಿರತೆಗಳು ತಿಂದು ಸಾವನ್ನಪ್ಪಿವೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಇನ್ನು, ಚಿರತೆ ಸಾವನ್ನಪ್ಪಿರುವ ಜಮೀನಿನ ಮಾಲೀಕ ಚೆನ್ನಬಸಪ್ಪ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದು ಘಟನೆ ಕುರಿತು ಹೆಚ್ಚಿನ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಮೃತಪಟ್ಟಿರುವ ಚಿರತೆಗಳು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಬಂದಿದ್ದವು ಎನ್ನಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ನಂಜನಗೂಡು ಪೊಲೀಸರು ಆಗಮಿಸಿದ್ದು, ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.