ಹೊಸದಿಲ್ಲಿ: ಟೆಸ್ಟ್ ಪಂದ್ಯಗಳಲ್ಲೂ, ರೋಹಿತ್ ಶರ್ಮ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸೌರವ್ ಗಂಗೂಲಿ ಕೂಡ, ರೋಹಿತ್ ಶರ್ಮ ಅವರನ್ನು ಟೆಸ್ಟ್‍ನಲ್ಲಿ ಓಪನರ್ ಆಗಿ ಆಡಿಸಬೇಕಿದೆ ಎಂದು ಹೇಳಿದ್ದರು. ಇದಕ್ಕೀಗ ಕುಂಬ್ಳೆ ಬೆಂಬಲ ನೀಡಿದ್ದಾರೆ.
ಭಾರತ ಕಳೆದ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ 2 ಟೆಸ್ಟ್‍ಗಳನ್ನು ಗೆದ್ದರೂ, ಆರಂಭಿಕರ ಸಮಸ್ಯೆ ಬಗೆಹರಿದಿಲ್ಲ.
ಮಾಯಾಂಕ್ ಅಗರ್ವಾಲ್ ಅವರೇನೋ ಯಶಸ್ಸು ಕಂಡಿದ್ದಾರೆ, ಆದರೆ ಕೆ.ಎಲ್. ರಾಹುಲ್ ನಿರೀಕ್ಷಿತ ಬ್ಯಾಟಿಂಗ್ ಬೀಸಲು ವಿಫಲರಾಗುತ್ತಿದ್ದಾರೆ. ಈ ಸ್ಥಾನಕ್ಕೆ ರೋಹಿತ್ ಅವರನ್ನು ಆಡಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಕುಂಬ್ಳೆ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಎರಡೂ ಟೆಸ್ಟ್ ಗಳಲ್ಲಿ, ರೋಹಿತ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಲಭಿಸಿರಲಿಲ್ಲ. ಈ ಸ್ಥಾನಕ್ಕೆ ಈಗಾಗಲೇ ಅಜಿಂಕ್ಯ ರಹಾನೆ, ಹನುಮ ವಿಹಾರಿ ಗಟ್ಟಿಯಾದಂತಿರುವ ಕಾರಣ ರೋಹಿತ್ ಪ್ರೇಕ್ಷಕನಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಹಿಟ್ ಮ್ಯಾನ್‍ಗೆ ಅವಕಾಶ ಕೂಡಬೇಕಾದ್ದು ಅಗತ್ಯ ಎಂಬುದು ಕುಂಬ್ಳೆ ಸೇರಿದಂತೆ ಅನೇಕ ಮಾಜಿಗಳ ಅಭಿಪ್ರಾಯ.