ಪುತ್ತೂರು: ವಿದ್ಯಾರ್ಥಿ ಬದುಕು ಮಾನವನ ಜೀವನದ ಒಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಸ್ಪಷ್ಟ ಗುರಿ, ಸತತ ಪರಿಶ್ರಮ, ಸಾಧಿಸುವ ಛಲ ಮತ್ತು ಪೂರಕ ತಯಾರಿಯೊಂದಿಗೆ ಮುನ್ನುಗ್ಗುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದು ದುಬೈಯ ಟಾಬ್ಕೊ ಎಮಿರೇಟ್ಸ್ ಎಲ್‍ಎಲ್‍ಸಿಯ ಆಪರೇಶನ್ ಮ್ಯಾನೇಜರ್ ಶಿವಕಿರಣ್ ರೈ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಆಯೋಜಿಸಿದ ರಾಷ್ಟ್ರಮಟ್ಟದ ಮ್ಯಾನೆಜ್‍ಮೆಂಟ್ ಫೆಸ್ಟ್ ಫ್ಯಾಕುಲಾ 2019 ‘ಮೋನಾರ್ಚ್’- ಇದನ್ನು ಸೆಪ್ಟಂಬರ್ 11ರಂದು ಕಾಲೇಜಿನ ಬೆಳ್ಳಿ ಹಬ್ಬ ಸಬಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು. ಎಂದರು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯದೊಂದಿಗೆ ನಾನಾ ರೀತಿಯ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. ವಿದ್ಯಾರ್ಥಿಗಳು ಅವಕಾಶ ಸಿಕ್ಕಿದಾಗ ತಮಗೆ ಸೂಕ್ತವೆನಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಬುದ್ಧತೆಯನ್ನು ರೂಪಿಸಿಕೊಳ್ಳುವಲ್ಲಿ ಹಿಂಜರಿಯಬಾರದು ಎಂದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಪ್ರಸ್ತುತ ಪ್ರತಿಭೆಗಳನ್ನು ಅನಾವರಣಗೊಳಿಸಲು ವಿಪುಲ ಅವಕಾಶಗಳು ಒದಗಿ ಬರುತ್ತವೆ. ವಿದ್ಯಾರ್ಥಿ ದೆಸೆಯಲ್ಲಿ ಹತಾಶರಾಗದೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿಯಿರಬೇಕು. ಉತ್ತಮ ಪ್ರಯತ್ನಗಳು ಪ್ರತಿ ಸಲವೂ ಫಲಪ್ರದವಾಗಿರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ವಿದ್ಯಾರ್ಥಿಗಳು ರಚನಾತ್ಮಕ ಚಿಂತನೆಗಳಿಗೆ ತಮ್ಮ ಸಮಯವನ್ನು ಬಳಸಬೇಕು. ಪ್ರಸ್ತುತ ಎಲ್ಲಾ ಕಡೆ ಅಸಮತೋಲನ ಪರಿಸ್ಥಿತಿ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಮಿಗುತೆಯನ್ನು ಹೆಚ್ಚಿಸುವ ಚಿಂತನೆಯನ್ನು ಹೊಂದಿರಬೇಕು. ದೇಶ ಕಟ್ಟುವ, ಯಶಸ್ಸನ್ನು ಉತ್ತುಂಗಕ್ಕೇರಿಸುವ ಮನೋಗುಣ ಹೊಂದಿದಾಗ ಪ್ರಗತಿಯ ಶಿಖರವನ್ನೇರಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೊತ್ಸಾಹಿಸುವ ಉದ್ದೇಶದಿಂದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಬೆಸ್ಟ್ ಮ್ಯಾನೇಜರ್, ಮೋಕ್ ಪ್ರೆಸ್, ಪಬ್ಲಿಕ್ ರಿಲೇಶನ್ ಮತ್ತು ಫೈನಾನ್ಸ್ ಎಕ್ಸ್‍ಪರ್ಟ್ ಎಂಬ ಸ್ಪರ್ಧೆಗಳಲ್ಲಿ 11 ತಂಡಗಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬಿಸಿನೆಸ್ ಕ್ವಿಜ್, ಎಕ್ಸ್ ಟೆಂಪೊರ್, ಡಿಬೆಟ್ತ್ ಫೋಕ್/ವೆಸ್ಟರ್ನ್ ಡ್ಯಾನ್ಸ್, ಪೋಸ್ಟರ್ ಮೇಕಿಂಗ್ ಎಂಬ ಸ್ಪರ್ಧೆಗಳಲ್ಲಿ 10 ತಂಡಗಳು ಪಾಲ್ಗೊಂಡಿವೆ.
ಫ್ಯಾಕುಲಾ ಸ್ಟಾಫ್ ಸಂಯೋಜಕ ಅಭಿಷೇಕ್ ಸುವರ್ಣ, ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ, ಪುಷ್ಪಾ ಎನ್ ಮತ್ತು ಹರ್ಷಿತ್ ಆರ್ ಸಹಕರಿಸಿದರು.
ವಿಭಾ ಮತ್ತು ಸಿಂಚನಾ ಪ್ರಾರ್ಥಿಸಿದರು. ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ವಿಬಿನ್ ಟಿ ಟಿ ವಂದಿಸಿದರು. ಅನುರಾಧಾ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.