ವಾಷಿಂಗ್ಟನ್ : “ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ, ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಅನುಮಾನ ನಮಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಗಮನಹರಿಸಬೇಕು” ಎಂದು ಅಮೆರಿಕದ ಇಬ್ಬರು ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನತರ ಕಣಿವೆ ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಲ್ಲಿ ಹಲವರನ್ನು ಬಂಧಿಸಲಾಗಿದೆ, ರಾಜಕೀಯ ನಾಯಕರನ್ನು ವಶಕ್ಕೆ ಪಡೆಯಲಾಗಿದೆ, ಜನರು ಬೇರೆ ಬೇರೆ ಪ್ರದೇಶದಲ್ಲಿರುವ ತಮ್ಮ ಆಪ್ತೇಷ್ಟರನ್ನು ಸಂಪರ್ಕಿಸುವುದಕ್ಕೂ ಸಾಧ್ಯವಾಗದಂತೆ ಸಂವಹನಕ್ಕೆ ಅಡ್ಡಿ ಮಾಡಲಾಗಿದೆ. ಅಂತರ್ಜಾಲ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ ಎಂದು ಹೌಸ್ ಆಫ್ ರಿಪ್ರಸೆಂಟೇಟಿವ್ಸ್ ನ ಇಂಡಿಯನ್-ಅಮೆರಿಕನ್ ಕಾಂಗ್ರೆಸ್ ವುಮನ್ ಪ್ರಮಿಳಾ ಜಯಪಾಲ್ ಆರೋಪಿಸಿದ್ದಾರೆ.
ಜೊತೆಗೆ ಇನ್ನೊಬ್ಬ ಕಾಂಗ್ರೆಸ್ ಮನ್ ಜೇಮ್ಸ್ ಮೆಕ್ ಗವರ್ನ್ ಸಹ ಪ್ರಮಿಳಾ ಅವರಿಗೆ ಬೆಂಬಲವಾಗಿ ನಿಂತಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿರುವ ಬಗ್ಗೆ ತನಿಖೆ ನಡೆಸಬೇಕು, ಮಾನವ ಹಕ್ಕು ಹೋರಾಟಗಾರರು ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಜಮ್ಮು-ಕಾಶ್ಮೀರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರಿಗೆ ಬರೆದಿರುವ ಪತ್ರದಲ್ಲಿ ಈ ಇಬ್ಬರು ಪ್ರತಿನಿಧಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ಅದು ಜಗತ್ತಿನ ಗಮನಕ್ಕೆ ಬರುತ್ತಿಲ್ಲ ಎಂದಿದ್ದಾರೆ.
ಬುಧವಾರವಷ್ಟೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದರು. ಅವರಿ ಹೀಗೆ ಮಧ್ಯಸ್ಥಿಕೆಯ ಮಾತನಾಡುತ್ತಿರುವುದು ನಾಲ್ಕನೇ ಬಾರಿ! ಜೊತೆಗೆ, ‘ಎರಡು ವಾರದ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ, ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಕೊಂಚ ತಣ್ಣಗಾಗಿದೆ’ ಎಂದು ಸಹ ಟ್ರಂಪ್ ಹೇಳಿದ್ದರು.