ಅನಾಥ ಮಗುವಂತೆ ಮಲಗಿದ ವಿಕ್ರಂಗೆ ‘ಹೆಲೋ’ ಹೇಳಿದ ನಾಸಾ; ವಿಕ್ರಂ ಸಂಪರ್ಕಕ್ಕೆ ಪ್ರಯತ್ನಿಸುತ್ತಿರುವ ನಾಸಾ – ಕಹಳೆ ನ್ಯೂಸ್
ನವದೆಹಲಿ : ಚಂದ್ರನಲ್ಲಿ ಸಂಪರ್ಕ ಕಳೆದುಕೊಂಡು ಅನಾಥ ಮಗುವಂತೆ ನಿಶ್ಚಲವಾಗಿ ನಿಂತಿರುವ ಭಾರತದ ಲ್ಯಾಂಡರ್ ವಿಕ್ರಂ ಅನ್ನು ಸಂಪರ್ಕಿಸಲು ನಾಸಾ ಕೂಡ ಪ್ರಯತ್ನಿಸಿದೆ. ಡೀಪ್- ಸ್ಪೇಸ್ ಆಂಟೆನಾ ಬಳಸಿ ‘ಹೆಲೋ’ ಸಂದೇಶ ರವಾನಿಸಿದೆ.
ಚಂದ್ರಯಾನ 2 ರ ಲ್ಯಾಂಡರ್ ವಿಕ್ರಮ್ ಇನ್ನೇನು ಚಂದ್ರನಲ್ಲಿ ಇಳಿದೇಬಿಟ್ಟಿತು ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡು ಕುಸಿದು ಬಿದ್ದಿತ್ತು. ಇದಾದ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಕ್ರಂ ಜತೆ ಮತ್ತೆ ಸಂಪರ್ಕ ಗಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಹೀಗಿರುವಾಗ ಅಮೆರಿಕದ ‘ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕೂಡ ವಿಕ್ರಂನನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ತನ್ನ ‘ಸ್ಪೇಸ್ ನೆಟ್ವರ್ಕ್ ಗ್ರೌಂಡ್ ಸ್ಟೇಷನ್’ ನಿಂದ ಲ್ಯಾಂಡರ್ ವಿಕ್ರಂನತ್ತ ರೇಡಿಯೋ ತರಂಗಗಳನ್ನು ಚದುರಿಸಿದೆ. ಇಸ್ರೋದ ಅನುಮತಿ ಪಡೆದೇ ಲ್ಯಾಂಡರ್ ವಿಕ್ರಂ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ ಎಂದು ನಾಸಾ ಮೂಲಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿವೆ.
ವಿಕ್ರಂ ಲ್ಯಾಂಡರ್ ಮರುಜೀವ ಪಡೆದು ಚುರುಕುಗೊಳ್ಳಲಿದ್ದಾನೆ ಎಂಬ ನಂಬಿಕೆ ಇದೆ. ಚಂದ್ರಯಾನ 2ರ ಉದ್ದೇಶಿತ 14 ದಿನದೊಳಗೆ ವಿಕ್ರಂ ಚೇತರಿಸಿಕೊಳ್ಳಬೇಕು. ಸೆಪ್ಟೆಂಬರ್ 21ರವರೆಗೆ ಮಾತ್ರ ವಿಕ್ರಂ ಇಳಿದಿರುವ ಸ್ಥಳದಲ್ಲಿ ಸೂರ್ಯನ ಬೆಳಕಿರುತ್ತದೆ. ನಂತರ 14 ದಿನಗಳ ಕಾಲ ಕತ್ತಲಿರುತ್ತದೆ. ಈ ಅವಧಿಯಲ್ಲಿ ವಿಕ್ರಂ ಪೂರ್ಣವಾಗಿ ಸ್ಥಗಿತಗೊಳ್ಳುವ ಸಂಭವವಿದೆ ಎಂದು ನಾಸಾ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಡೀಪ್ ಸ್ಪೇಸ್ ನೆಟ್‍ವರ್ಕ್ ಸ್ಟೇಷನ್ ನಿಂದ 12 ಕಿ.ವಾ . ಸಾಮಥ್ರ್ಯದ ರೇಡಿಯೋ ತರಂಗಗಳನ್ನು ಪ್ರರಸರಿಸಲಾಗಿದೆ. ಸಂಪರ್ಕ ಕಡಿದುಕೊಂಡಿರುವ ವಿಕ್ರಂ ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ ಬರುವಂತೆ ಪ್ರಚೋದಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ನಾಸಾದ ಮತ್ತೊಬ್ಬ ವಿಜ್ಞಾನಿ ಸ್ಕಾಟ್ ಟುಲಿ ಹೇಳಿದ್ದಾರೆ. ಸ್ಕಾಟ್ ಟುಲಿ ಅವರು ನಾಪತ್ತೆಯಾಗಿದ್ದ ನಾಸಾದ ಗೂಢಾಚರಿ ಉಪಗ್ರಹ ‘ಇಮೇಜ್’ ಅನ್ನು 2005ರಲ್ಲಿ ಹುಡುಕಿಕೊಡುವ ಮೂಲಕ ಜನಪ್ರಿಯರಾಗಿದ್ದರು. ಇದೀಗ ಒಂದೇ ಡೀಪ್ ಸ್ಪೇಸ್ ನೆಟ್‍ವರ್ಕ್ ಸ್ಟೇಷನ್ ನಿಂದ ಸಂದೇಶ ರವಾನಿಸಲಾಗಿದೆ. ಮುಂದೆ ನಾಸಾದ ಇಂತಹ ಮೂರು ಸ್ಟೇಷನ್‍ಗಳಿಂದಲೂ ವಿಕ್ರಂ ಇರುವಲ್ಲಿಗೆ ರೇಡಿಯೋ ತರಂಗ ಪ್ರಸರಿಸಲಾಗುವುದು ಎಂದಿದ್ದಾರೆ ಟುಲಿ.
ನಾಸಾ ಒಟ್ಟು ಮೂರು ಕಡೆ ಡೀಪ್ ಸ್ಪೇಸ್ ನೆಟ್‍ವರ್ಕ್ ಸ್ಟೇಷನ್ ಹೊಂದಿದೆ. ಗೋಲ್ಡ್‍ಸ್ಟೋನ್, ದಕ್ಷಿಣ ಕ್ಯಾಲಿಫೋರ್ನಿಯಾ (ಅಮೆರಿಕ), ಮ್ಯಾಡ್ರಿಡ್ (ಸ್ಪೇನ್ ) ಮತ್ತು ಕ್ಯಾನ್‍ಬೆರ್ರಾ (ಆಸ್ಟ್ರೇಲಿಯಾ) ದಲ್ಲಿ ತಲಾ ಒಂದೊಂದು ಸ್ಟೇಷನ್‍ಗಳಿವೆ.
ಭಾರತದ ಯೋಜನೆಯಲ್ಲಿ ನಾಸಾ ಆಸಕ್ತಿ ತೋರಿದ್ದೇಕೆ:
ಹಲವಾರು ಕಾರಣಗಳಿಂದಾಗಿ ನಾಸಾ, ಭಾರತದ ಚಂದ್ರಯಾನ 2ರ ಮೇಲೆ ಒಲವು ಹೊಂದಿದೆ. ಮೊದಲನೆಯದು ನಾಸಾ ತನ್ನ ಲೇಸರ್ ರಿಫ್ಲೆಕ್ಟ್‍ರ್ ರಚನೆಯಾದ ‘ಪ್ಯಾಸೀವ್ ಪೇಲೋಡ್’ ಅನ್ನು ವಿಕ್ರಂ ಲ್ಯಾಂಡರ್‍ಗೆ ಅಳವಡಿಸಲಾಗಿತ್ತು. ವಿಕ್ರಂ ಇಳಿಯಲಿಯಲಿರುವ ನಿರ್ದಿಷ್ಟ ಸ್ಥಳ ಮತ್ತು ಭೂಮಿ-ಚಂದ್ರನ ನಡುವಿನ ನಿಖರವಾದ ದೂರ ತಿಳಿಯುವ ಉದ್ದೇಶದಿಂದ ‘ಪ್ಯಾಸೀವ್ ಪೇಲೋಡ್’ ಅಳವಡಿಸಲಾಗಿತ್ತು. ಆದರೆ, ವಿಕ್ರಂ ಕುಸಿದು ಬಿದ್ದ ನಂತರ ನಾಸಾದ ಪೇಲೋಡ್‍ನ ಹಣೆಬರಹ ಏನಾಗಿದೆಯೋ ತಿಳಿಯದು.
ಇದಕ್ಕೂ ಹೆಚ್ಚಿನದಾಗಿ ಭಾರತದ ಚಂದ್ರಯಾನ 2ರಿಂದ ಚಂದ್ರನ ಕುರಿತು ನಾಸಾ ಹೆಚ್ಚಿನ ಮಾಹಿತಿ ನಿರೀಕ್ಷಿಸಿತ್ತು. ಕಾರಣ ಚಂದ್ರಯಾನ 2ರಲ್ಲಿ ಚಂದ್ರನ ಮೇಲ್ಮೈಯನ್ನು ಮೂರು ಆಯಾಮಗಳಲ್ಲಿ (3ಡಿ) ಚಿತ್ರೀಕರಿಸಿ ಕಳಿಸಬಲ್ಲ 8 ಅತ್ಯಾಧುನಿಕ ಪೇಲೋಡ್‍ಗಳನ್ನು ಕಳುಹಿಸಲಾಗಿತ್ತು. ನಾಸಾ ಕೂಡ 2024ರಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವ ಮಹತ್ವದ ಯೋಜನೆ ಕೈಗೊಂಡಿದೆ. ಹೀಗಾಗಿ ಚಂದ್ರನ ವಾತಾವರಣದ ಕುರಿತು ಹೆಚ್ಚಿನ ತಿಳಿವಳಿಕೆ ನಾಸಾಕ್ಕಿದೆ. ಈ ಎಲ್ಲ ಕಾರಣಗಳಿಂದ ನಾಸಾ, ಭಾರತದ ಚಂದ್ರಯಾನ 2ರ ಮೇಲೆ ಹೆಚ್ಚಿನ ಕಾಳಜಿ ತೋರುತ್ತಿದೆ. ಒಂದು ವೇಳೆ ವಿಕ್ರಂ ಚೇತರಿಸಿಕೊಂಡರೆ ಭಾರತಕ್ಕಷ್ಟೇ ಅಲ್ಲ ಅಮೆರಿಕಕ್ಕೂ ಅದರಿಂದ ಪ್ರಯೋಜನವಿದೆ.