Tuesday, January 21, 2025
ಸುದ್ದಿ

ಗಡಿಯಲ್ಲಿ ಮತ್ತೆ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದ ಪಾಕಿಸ್ತಾನ; 275 ಉಗ್ರರಿಗೆ ತರಬೇತಿ ಕೊಡುತ್ತಿರುವ ಪಾಪಿ ಪಾಕ್ – ಕಹಳೆ ನ್ಯೂಸ್

ನವದೆಹಲಿ : ಉರಿ ಉಗ್ರ ದಾಳಿ ಬಳಿಕ ಪಿಒಕೆಯಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಉಗ್ರನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ ಇದೀಗ ಅದೇ ಜಾಗದಲ್ಲಿ ಪಾಕಿಸ್ತಾನ ಸೇನೆ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದೆ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿ ಬಳಿಕ ಭಾರತದ ಪ್ರತೀಕಾರ ಮತ್ತು ಅಂತಾರಾಷ್ಟ್ರೀಯ ಮಟ್ಟದ ತನಿಖೆ ಭಯದಿಂದ ಉಗ್ರರ ನೆಲೆಗಳನ್ನು ಭಾರತದ ಗಡಿ ಭಾಗದಿಂದ ಸ್ಥಳಾಂತರಿಸಿದ್ದ ಪಾಕಿಸ್ತಾನ ಇದೀಗ ಉಗ್ರರನ್ನು ಮತ್ತೆ ಗಡಿ ಭಾಗಕ್ಕೆ ಕರೆಸಿಕೊಂಡಿದೆ. ಭಾರತ-ಪಾಕ್ ಗಡಿ ಎಲ್‍ಒಸಿಯಲ್ಲಿ ಪಾಕಿಸ್ತಾನ ಸೇನೆ 7 ಉಗ್ರ ನೆಲೆಗಳನ್ನು ಮತ್ತೆ ಸಕ್ರಿಯಗೊಳಿಸಿದ್ದು, ಇಲ್ಲಿ ಸುಮಾರು 275ಕ್ಕೂ ಅಧಿಕ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಶ್ಮೀರಕ್ಕೆ ವಿಶೇಷಾಧಿಕಾರ ಕಲ್ಪಿಸುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಭಾರತದ ವಿರುದ್ದ ಕೆಂಡಾಮಂಡಲವಾಗಿರುವ ಪಾಕಿಸ್ತಾನ, ವಾಮ ಮಾರ್ಗದಿಂದಾದರೂ ಸರಿ ಭಾರತವನ್ನು ಮಣಿಸಿ ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಇದೇ ಕಾರಣಕ್ಕಾಗಿ ಗಡಿಯಲ್ಲಿ 7 ಉಗ್ರ ನೆಲೆಗಳನ್ನು ಸಕ್ರಿಯಗೊಳಿಸಿದ್ದು, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಅಲ್ಲಿ ಸುಮಾರು 275 ಉಗ್ರರಿಗೆ ತರಬೇತಿ ನೀಡುತ್ತಿದೆ. ಇದರಲ್ಲಿ ಆಫ್ಘಾನಿಸ್ತಾನ ಮತ್ತು ಪಶ್ತೂನ್ ಪ್ರಾಂತ್ಯದ ಉಗ್ರರೂ ಇದ್ದಾರೆ ಎನ್ನಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಗುಪ್ತಚರ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರ, ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ದಳ ಐಎಸ್‍ಐ ಗಡಿ ಭಾಗದಲ್ಲಿ ಉಗ್ರರ ಲಾಂಚ್ ಪ್ಯಾಡ್ ರೂಪಿಸಿವೆ. ಇದರ ಮೂಲಕ ಒಟ್ಟು 275 ಉಗ್ರರು ಭಾರತದೊಳಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಗುರೇಜ್ ಸೆಕ್ಟರ್ ನಿಂದ 80, ಮಚ್ಚಾಲ್‍ನಿಂದ 60, ಕಾರ್ನಹ್‍ನಿಂದ 50, ಕೇರನ್‍ನಿಂದ 40, ಉರಿಯಿಂದ 20, ನವ್‍ಗಾಂನಿಂದ 15 ಮತ್ತು ರಾಮ್ ಪುರದಿಂದ 10 ಉಗ್ರರು ದಾಳಿಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಉಗ್ರರು ಸಿಕ್ಕಿಬಿದ್ದರೂ ನುಣುಚಿಕೊಳ್ಳಲಿರುವ ಪಾಕ್
ಇನ್ನು ಒಂದು ವೇಳೆ ಕಾರ್ಯಾಚರಣೆ ವೇಳೆ ಉಗ್ರರು ಸಿಕ್ಕಿಬಿದ್ದರೂ ಮುಂದಾಗುವ ಮುಖಭಂಗದಿಂದ ತಪ್ಪಿಸಿಕೊಳ್ಳಲು ಇತರೇ ಪ್ರಾಂತ್ಯಗಳ ಉಗ್ರರನ್ನೂ ತನ್ನ ಕ್ಯಾಂಪ್‍ನೊಳಗೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಈ ಉಗ್ರರನ್ನು ಭಾರತದ ಗಡಿಯೊಳಕ್ಕೆ ಕಳುಹಿಸಿ ದಾಳಿ ನಡೆಸಿದರೂ ಅವರು ಆಫ್ಘಾನ್ ಮತ್ತು ಪಶ್ತೂನ್‍ನ ಉಗ್ರರಾಗಿರುವುದರಿಂದ ಇದರಲ್ಲಿ ತನ್ನ ಕೈವಾಡವೇನೂ ಇಲ್ಲ ಎಂದು ಪಾಕ್ ಸಮರ್ಥಿಸಿಕೊಳ್ಳಬಹುದಾಗಿದೆ.