ಮಂಗಳೂರು: ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು, ರದ್ದು ಮಾಡುವ ಮುಖೇನ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತುಪಡಿಸಲಾಗಿದೆ. ಈ ಮೂಲಕ ಅಖಂಡ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ಕೇಂದ್ರ ಸರಕಾರ ನೀಡಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಬುಧವಾರ ನಗರದ ರಾಮೃಕೃಷ್ಣ ಮಠದಲ್ಲಿ ಆಯೋಜಿಸಲಾದ, ಸ್ವಚ್ಛ ಭಾರತ- ಶ್ರೇಷ್ಠ ಭಾರತ ವಿಷಯದ ಕುರಿತ ವಿಚಾರಗೋಷ್ಠಿ ಹಾಗೂ ಸ್ವಾಮಿ ವಿವೇಕಾನಂದರ ಶಿಕಾಗೋ ಉಪನ್ಯಾಸದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 125 ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಸುಭದ್ರ ರಾಷ್ಟ್ರ ನಿರ್ಮಾಣ ಮಾಡಲು ಪಣತೂಡಬೇಕು. ಹಳೇ ಚಿಂತನೆಯ ಮೂಲಕ ಹೊಸ ಕಲ್ಪನೆಯನ್ನು, ಜಗತ್ತಿಗೆ ನೀಡುವ ಪ್ರಯತ್ನ ಸಾಗಬೇಕು ಎಂದು ಹೇಳಿದರು. ಯಾಕೆಂದರೆ ಅದೆಷ್ಟೋ ದೇಶಗಳಿಂದ ಬಂದವರಿಗೆ ಆಶ್ರಯ ನೀಡಿದ ಹಿರಿಮೆ ಭಾರತಕ್ಕಿದೆ. ಸ್ವಾಮಿ ವಿವೇಕಾನಂದರು ಎಲ್ಲ ಹಂತದಲ್ಲಿಯೂ, ಪ್ರೇರಣಾದಾಯಿಗಳು. ಅವರು ಮಾಡಿದ ಒಂದು ಭಾಷಣವನ್ನು 125 ವರ್ಷಗಳ ನಂತರವೂ, ನೆನಪಿಸಿಕೂಂಡು ಆ ದಿನವನ್ನು ಈಗಲೂ ಆಚರಿಸುತ್ತೇವೆ ಅಂದರೆ ಅದಕ್ಕಿಂತ ವಿಶೇಷ ಇನ್ನೊಂದಿಲ್ಲ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಮಕೃಷ್ಣ ಮಿಷನ್ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಪರಿಸರ ಹೋರಾಟ ಗಾರ ದಿನೇಶ್ ಹೊಳ್ಳ, ಜಾದೂಗಾರ ಕುದ್ರೋಳಿ ಗಣೇಶ್, ಉಪನ್ಯಾಸಕಾರ ಶ್ರೀಕೃಷ್ಣ ಉಪಾಧ್ಯಾಯ ಪುತ್ತೂರು ಉಪಸ್ಥಿತರಿದ್ದರು. ಮಂಗಳೂರು ರಾಮ ಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಪ್ರಸ್ತಾವನೆಗೈದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸಂತೋಷ್ ನಿರೂಪಿಸಿದರು.