Monday, January 20, 2025
ರಾಜಕೀಯ

ರಾಜಕೀಯದಲ್ಲಿ ಮಸಾಲೆ ಇರಬೇಕು, ಆಗ ಮಾತ್ರ ಪ್ರಚಾರ ಸಿಗುತ್ತದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್

ಮಂಗಳೂರು : ನೆರೆ, ಬರ, ಕೃಷಿ ಹಾಗೂ ನೇಕಾರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರದ ಬಗ್ಗೆ ರಾಜ್ಯದ ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ಲಿಷ್ಟಕರ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ರಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡಿ ನೆರೆ ಹಾಗೂ ಬರ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿಂದಿನ ಸಿಎಂಗಳಿಗಿಂತ ಅತ್ಯುತ್ತಮ ರೀತಿಯಲ್ಲಿ ಯಡಿಯೂರಪ್ಪ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ನೆರೆ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ 10 ಸಾವಿರ ರು., ಶಾಶ್ವತ ಮನೆ ನಿರ್ಮಾಣಕ್ಕೆ 5 ಲಕ್ಷ ರು., ಮನೆ ನಿರ್ಮಾಣ ವರೆಗೆ ಬಾಡಿಗೆ ಭತ್ಯೆಯಾಗಿ ಮಾಸಿಕ 5 ಸಾವಿರ ರು. ಬಿಡುಗಡೆಗೆ ಆದೇಶಿಸಿದ್ದಾರೆ. ಅಲ್ಲದೆ 50 ಸಾವಿರ ನೇಕಾರರ ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತರ ಖಾತೆಗೆ ಜಮೆ ಮಾಡುವ 6 ಸಾವಿರ ರು.ಗೆ ರಾಜ್ಯದ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ಜಮೆ ಆಗುವಂತೆ ನೋಡಿಕೊಂಡಿದ್ದಾರೆ. ಇದು ಸಿಎಂ ಅವರ ಜನಪರ ಸಾಧನೆಯ ಹೆಗ್ಗುರುತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಳೆದ ಐದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ವ್ಯಕ್ತವಾಗಿಲ್ಲ. ನೇಕಾರರ, ಮೀನುಗಾರರ ಸಾಲ ಮನ್ನಾ ಮಾಡಿದ್ದು, ಮನ್ನಾಗೊಳ್ಳುವ ಮೊತ್ತವನ್ನು ಪಾವತಿಸದಂತೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಪ್ರತಾಪ್‍ಸಿಂಹ ನಾಯಕ್ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಕೀಯದಲ್ಲಿ ಮಸಾಲೆ ಬೇಕು!
ರಾಜಕೀಯದಲ್ಲಿ ಮಸಾಲೆ ಬೇಕು. ಬಿಜೆಪಿ ಕೋರ್ ಕಮಿಟಿ ವಿಚಾರ ಇರಬಹುದು ಅಥವಾ ಇನ್ನು ಯಾವುದೇ ಸಂಗತಿಗಳು ಇರಬಹುದು. ಸ್ವಲ್ಪ ಮಸಾಲೆ ಇದ್ದರೆ ಮಾತ್ರ ಪ್ರಚಾರ ಸಿಗುತ್ತದೆ. ಇದರಿಂದಾಗಿ ನಿತ್ಯವೂ ಮಾಧ್ಯಮಗಳಲ್ಲಿ ಒಂದಿಲ್ಲೊಂದು ಸುದ್ದಿ ಬಿಜೆಪಿ ಬಗ್ಗೆ ಬರುತ್ತಲೇ ಇರುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಮಾರ್ಮಿಕವಾಗಿ ಹೇಳಿದರು.

ಬಿಜೆಪಿಯ ಮೊದಲ ಕೋರ್ ಕಮಿಟಿ ಸಭೆಗೆ ಅರಲಿಂದ ಲಿಂಬಾವಳಿ, ಅಶೋಕ್ ಹಾಜರಾಗಿಲ್ಲ ಎಂಬ ಸುದ್ದಿ ಪ್ರಚಾರವಾಯಿತು. ವಾಸ್ತವದಲ್ಲಿ ಅನಾರೋಗ್ಯದಿಂದ ಅಶೋಕ್ ಬಂದಿರಲಿಲ್ಲ. ಇದೇ ರೀತಿ ಉಡುಪಿಯಲ್ಲಿ ಬೈಂದೂರು ಹಾಗೂ ಕುಂದಾಪುರ ಶಾಸಕರು ನನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರು ಅನಿವಾರ್ಯವಾಗಿ ಬರಲಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ಇದನ್ನೇ ಮಸಾಲೆ ಸೇರಿಸಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಯಿತು. ಇಂತಹ ಮಸಾಲೆ ಸುದ್ದಿಗಳು ಬಿಜೆಪಿ ಸದಾ ಪ್ರಚಾರದಲ್ಲಿ ಇರಲು ನೆರವಾಗುತ್ತದೆ ಎಂದು ಮಾಧ್ಯಮಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಬಿಜೆಪಿಯಲ್ಲಿ ಯಾವುದೇ ಅಸಮಾಧಾನ, ಭಿನ್ನಮತ ಇಲ್ಲ, ಎಲ್ಲವೂ ಸರಿಯಾಗಿಯೇ ಇದೆ ಎಂದು ನಳಿನ್ ಕುಮಾರ್ ಸ್ಪಷ್ಟಪಡಿಸಿದರು.