Tuesday, January 21, 2025
ಸುದ್ದಿ

ಫಿಲೋಮಿನಾದಲ್ಲಿ ತಾಲೂಕು ಮಟ್ಟದ ಡಿಕ್ಲಮೇಶನ್ ಕಂಟೆಸ್ಟ್ – ಕಹಳೆ ನ್ಯೂಸ್

ಪುತ್ತೂರು: ಯುವ ಜನತೆಯಲ್ಲಿ ಬಲಿಷ್ಠ ರಾಷ್ಟ್ರ ನಿರ್ಮಾಣದಂತಹ ಉದಾತ್ತ ಧ್ಯೇಯವನ್ನು ಸಾಕಾರಗೊಳಿಸಬಲ್ಲ ಅಗಾಧವಾದ ಸಾಮರ್ಥ್ಯ ಅಡಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರಾಭಿಮಾನದಿಂದ ಮುನ್ನಡೆಯುವ ಸಂಕಲ್ಪವನ್ನು ಹೊಂದಿರಬೇಕು ಎಂದು ಪುತ್ತೂರು ತಾಲೂಕು ಪಂಚಾಯತ್ ಸದಸ್ಯ ರಾಧಾಕೃಷ್ಣ ಆಳ್ವ ಸಾಜ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಸರಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ನೆಹರೂ ಯುವ ಕೇಂದ್ರ ಮಂಗಳೂರು, ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಘಟಕ, ಪುತ್ತೂರು ತಾಲೂಕು ಯುವಜನ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರ ನಿರ್ಮಾಣದ ಧ್ಯೇಯೋದ್ದೇಶದೊಂದಿಗೆ 2020 ರ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ‘ಸಬ್‍ಕಾ ಸಾತ್, ಸಬ್‍ಕಾ ವಿಕಾಸ್, ಸಬ್‍ಕಾ ವಿಶ್ವಾಸ್’ ಎಂಬ ವಿಷಯದಡಿಯಲ್ಲಿ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಸೆಪ್ಟಂಬರ್ 12 ರಂದು ಆಯೋಜಿಸಲಾದ ‘ಡಿಕ್ಲಮೇಶನ್ ಕಂಟೆಸ್ಟ್’ ಇದರ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ, ಮಾತನಾಡಿದರು. ಯುವ ಜನತೆ ಸ್ಪರ್ದೆಗಳಲ್ಲಿ ಭಾಗವಹಿಸುವ ಆಸಕ್ತಿ ಹೊಂದಿರಬೇಕು. ಇದು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ. ಯುವ ಪ್ರತಿಭೆಗಳು ವಿವಿಧ ಹಂತಗಳಲ್ಲಿ ನಡೆಸಲಾಗುವ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡು, ರಾಷ್ಟ್ರ ಮಟ್ಟದಲ್ಲಿಯೂ ಮಿನುಗುವಂತಾಗಬೇಕು ಎಂದು ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ರಘುವೀರ್ ಮಾತನಾಡಿ, ಯುವ ಜನ ಇಲಾಖೆಯು ಯುವ ಜನತೆಯನ್ನು ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಾನಾ ರೀತಿಯ ಕಾರ್ಯ ಯೋಜನೆಗಳನ್ನು ಜಾರಿ ಗೊಳಿಸುತ್ತಿದೆ. ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಯುವ ಜನತೆಯನ್ನು ಒಗ್ಗೂಡುವಂತೆ ಪ್ರೇರೇಪಿಸುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ. ಆದರೆ ಸ್ಪರ್ಧಿಗಳಿಗೆ ಸಿಗುವ ಅನುಭವವು ಅನನ್ಯವಾದುದು ಎಂದರು.

ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು ಮಾತನಾಡಿ, ಕೇಂದ್ರ ಸರಕಾರವು ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗೋಸ್ಕರ ಹಲವಾರು ಯೋಜನೆಗಳನ್ನು ನಿರಂತರ ಜಾರಿಗೊಳಿಸುತ್ತಿದೆ. ವಿದ್ಯಾರ್ಥಿ ಯುವ ಜನತೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಷಣ್ಮುಖ ಯುವಕ ಮಂಡಲ ಸರ್ವೆ ಇದರ ಅಧ್ಯಕ್ಷ ಕಮಲೇಶ್ ಮಾತನಾಡಿ, ನೆಹರೂ ಯುವ ಕೇಂದ್ರದ ಕಾರ್ಯವ್ಯಾಪ್ತಿಗೆ ಬರುವ ಯುವಕ-ಯುವತಿ ಮಂಡಳಿಗಳು ಯುವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ವಿವಿಧ ರೀತಿಯ ಅಭಿಯಾನಗಳನ್ನು ಸಂಯೋಜಿಸುತ್ತಿವೆ. ಯುವ ಜನಾಂಗವು ಸಮಾಜಮುಖಿ ಚಿಂತನೆಯೊಂದಿಗೆ ತಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಲು ಇವು ಸಹಕಾರಿ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಮಾತನಾಡಿ, ಸಬ್‍ಕಾ ಸಾತ್, ಸಬ್‍ಕಾ ವಿಕಾಸ್, ಸಬ್‍ಕಾ ವಿಶ್ವಾಸ್ ಅನ್ನುವ ವಿಷಯ ಅದ್ಭುತ ಪರಿಕಲ್ಪನೆಯನ್ನು ಒಳಗೊಂಡಿದೆ. ಸರಕಾರದ ಇಂತಹ ಧ್ಯೇಯ ವಾಕ್ಯ ಕಾರ್ಯರೂಪಗೊಂಡಾಗ ಭಾರತ ದೇಶವು ವಿಶ್ವ ಗುರುವಿನ ಸ್ಥಾನಮಾನ ಗಳಿಸಲು ಸಾಧ್ಯವಿದೆ ಎಂದರು.

ನೆಹರೂ ಯುವ ಕೇಂದ್ರ ಇದರ ತಾಲೂಕು ಸಂಯೋಜಕ ಆದೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಸ್ವಯಂ ಸೇವಕಿ ಅಖಿಲಾ ಪ್ರಾರ್ಥಿಸಿದರು. ನೆಹರೂ ಯುವ ಕೇಂದ್ರ ಇದರ ತಾಲೂಕು ಸಂಯೋಜಕ ಶ್ರೀಕಾಂತ್ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ್ ಅಂಚನ್ ವಂದಿಸಿದರು. ಸ್ವಯಂ ಸೇವಕಿ ಪೂಜಾ ಎಮ್ ಕೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಜರಗಿದ ಸ್ಪರ್ಧೆಯ ತೀರ್ಪುಗಾರರಾಗಿ ಕಾಲೇಜಿನ ಪ್ರಾಧ್ಯಾಪಕರಾದ ಭಾರತಿ ಎಸ್ ರೈ, ಡಾ| ಡಿಂಪಲ್ ಜೆನ್ನಿಫರ್ ಫೆರ್ನಾಂಡಿಸ್ ಮತ್ತು ತೇಜಸ್ವಿ ಭಟ್ ಕೆ ಸಹಕರಿಸಿದರು.