Recent Posts

Tuesday, January 21, 2025
ಸುದ್ದಿ

ಸದ್ದಿಲ್ಲದೆ ಪರಿಸರ ಪ್ರೇಮ ಪಸರಿಸುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘ ಮೂವತ್ತೈದು ಶಿಕ್ಷಣ ಸಂಸ್ಥೆಗಳಿಂದ ಆರು ಸಾವಿರ ಗಿಡ ನೆಡುವ ಕಾರ್ಯಕ್ರಮ  – ಕಹಳೆ ನ್ಯೂಸ್

ಪುತ್ತೂರು: ಎಪ್ರಿಲ್ ಮೇ ತಿಂಗಳಲ್ಲಿ ಧಗೆ ಏರುತ್ತಿದ್ದಂತೆ ಪರಿಸರ ಸಂರಕ್ಷಿಸಬೇಕು, ಗಿಡಗಳನ್ನು ನೆಡಬೇಕು, ಸಸ್ಯಗಳೇ ನಮ್ಮ ಬದುಕಿನ ಬುನಾದಿ ಎಂಬೆಲ್ಲಾ ಮಾತುಗಳು ಆಗಿಂದಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಜಾಗತಿಕ ತಾಪಮಾನದ ಬಗೆಗೂ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಮಳೆ ಬಂದೊಡನೆ ಮೇ ತಿಂಗಳಲ್ಲಿ ಹೊಮ್ಮಿದ ಉತ್ಸಾಹ ಕುಗ್ಗಿ ಗಿಡ ನೆಡುವ ಕಾರ್ಯ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತದೆ!

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇಲ್ಲೊಂದು ಸಂಸ್ಥೆಯಿದೆ. ಈ ಸಂಸ್ಥೆ ಪರಿಸರದ ಬಗೆಗಿನ ನಿಜಕಾಳಜಿಯನ್ನು ಸದ್ದಿಲ್ಲದೆ ಕಾರ್ಯರೂಪದಲ್ಲಿ ಕಾಣಿಸುತ್ತಿದೆ. ಹೌದು, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಗಿಡಗಳನ್ನು ಬೆಳೆಸುವ ಕಾಯಕದಲ್ಲಿ ಕಳೆದ ತಿಂಗಳೊಂದರಿಂದ ಕಾರ್ಯಪ್ರವೃತ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಅರುವತ್ತೇಳು ಸಂಸ್ಥೆಗಳಿವೆ. ಅವುಗಳಲ್ಲಿ ಆಯ್ದ ಮೂವತ್ತೈದು ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ಗ್ರಾಮವಿಕಾಸ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಪ್ರತಿಯೊಂದು ಸಂಸ್ಥೆಯೂ ಒಂದೊಂದು ಗ್ರಾಮವನ್ನು ಆಯ್ದುಕೊಂಡು ಆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ. ಕಳೆದ ವರ್ಷ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಸಂಬಂಧಿ ಕಾರ್ಯಾಗಾರಗಳು, ಮೆಡಿಕಲ್ ಚೆಕಪ್‍ಗಳು, ಮನೆಮದ್ದು, ಜಾನುವಾರು ಲಸಿಕೆ ಕಾರ್ಯಕ್ರಮಗಳು, ಯೋಗ ಶಿಬಿರಗಳು ನಡೆದಿದ್ದರೆ ಈ ಬಾರಿ ಯೋಜಿಸಿದ್ದು ಪರಿಸರ ಪ್ರೀತಿ. ಅದರನ್ವಯ ಪ್ರತಿಯೊಂದು ವಿವೇಕಾನಂದ ಸಂಸ್ಥೆಯೂ ತಾನು ಗ್ರಾಮ ವಿಕಾಸಕ್ಕಾಗಿ ಆಯ್ದುಕೊಂಡ ಗ್ರಾಮದೊಂದಿಗೆ ನೆರೆಯ ಮತ್ತೊಂದೂ ಗ್ರಾಮವನ್ನು ಸೇರಿಸಿ ಒಟ್ಟು ಎರಡೆರಡು ಗ್ರಾಮದಲ್ಲಿ ಗಿಡ ನೆಡುವ ಯೋಜನೆ ಸಿದ್ಧವಾಯಿತು.

ಕೇವಲ ಗಿಡ ನೆಡುವುದಷ್ಟೇ ಈ ಯೋಜನೆಯ ಉದ್ದೇಶವಲ್ಲ. ಜತೆಗೆ ಗಿಡ ಮರಗಳ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಉದ್ದೇಶ. ಈ ಹಿನ್ನೆಲೆಯಲ್ಲಿ ಗ್ರಾಮದ ಕಮ್ಮಿಯೆಂದರೂ 25 ಮನೆಗಳಿಗೆ ತೆರಳಿ ಆ ಮನೆಗೆ ಸಂಬಂಧಿಸಿದ ಜಾಗದಲ್ಲಿ ಕನಿಷ್ಟ ಎರಡು ಗಿಡ ನೆಡಬೇಕೆಂಬ ಯೋಚನೆಯೂ ಬಂತು. ಮಾತ್ರವಲ್ಲದೆ ಆ ಗಿಡಗಳನ್ನು ಜೋಪಾನವಾಗಿ ರಕ್ಷಿಸುವಂತೆ ಆ ಮನೆಯವರ ಬಳಿ ಪ್ರೀತಿಪೂರ್ವಕವಾಗಿ ವಿನಂತಿಸಬೇಕೆಂಬ ನಿರ್ಧಾರವಾಯಿತು. ಮುಂದೆ ನಡೆದದ್ದೆಲ್ಲ ಈಗ ಇತಿಹಾಸ!

ಈ ಬಾರಿ ಸುಮಾರು ಸಾವಿರ ಗಿಡ ನೆಡುವ ಯೋಜನೆ ವಿವೇಕಾನಂದ ವಿದ್ಯಾವರ್ಧಕ ಸಂಘದ್ದು. ಅದಕ್ಕಾಗಿ ವಿವಿಧ ಸರ್ಕಾರಿ ನರ್ಸರಿಗಳಿಂದ ಅಷ್ಟು ಸಂಖ್ಯೆಯ ಗಿಡಗಳನ್ನು ತಂದೂಆಗಿದೆ. ಅವುಗಳಲ್ಲಿ ಸುಮಾರು ಐದೂವರೆ ಸಾವಿರದಷ್ಟು ಗಿಡಗಳನ್ನು ಅದಾಗಲೇ ನೆಟ್ಟೂ ಆಗಿದೆ. ಸದ್ಯದಲ್ಲೇ ಉಳಿದಿರುವ ಒಂದು ಐದುನೂರು ಗಿಡಗಳ ವಿಲೇವಾರಿಯೂ ನಡೆಯಲಿದೆ.

ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಕಡಬ ಹೀಗೆ ಬೇರೆ ಬೇರೆ ತಾಲೂಕುಗಳ ಸುಮಾರು ಐವತ್ತು ಗ್ರಾಮಗಳಲ್ಲಿ ಈ ಗಿಡ ನೆಡುವಕಾಯಕ ನಡೆದಿದೆ. ವಿವಿಧ ವಿವೇಕಾನಂದ ವಿದ್ಯಾಸಂಸ್ಥೆಗಳ ಸುಮಾರು ಆರು ಸಾವಿರ ಮಂದಿ ವಿದ್ಯಾರ್ಥಿಗಳು ಈ ಒಟ್ಟೂ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಬಹುತೇಕ ಪ್ರತಿಯೊಂದು ಗ್ರಾಮದಲ್ಲೂ ಉದ್ಘಾಟನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ಆಯೋಜಿಸಿ ಗಿಡಗಳ ಅವಶ್ಯಕತೆಗಳ ಬಗೆಗೆ ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಲಾಗಿದೆ. ಕೆಲವೆಡೆ ಎರಡೆರಡು ಗ್ರಾಮಗಳನ್ನು ಸೇರಿಸಿಯೂ ಕಾರ್ಯಕ್ರಮಗಳು ನಡೆದಿವೆ.

ಹಲಸು, ಮಾವು, ಪುನರ್ಪುಳಿ, ನೇರಳೆ, ರೆಂಜ, ಕೆತ್ತೆಹುಳಿ, ಸಾಗುವಾನಿ, ಮಾಗುವಾನಿ, ಕಿರಾಲ್‍ಬೋಗಿ, ಬಸವನ ಪಾದ, ಬಿಲ್ವಪತ್ರೆ, ಬಾದಾಮಿ, ನೆಲ್ಲಿ ಹೀಗೆ ನಾನಾ ಗಿಡಗಳು ಈಗ ವಿವಿಧ ಮಂದಿಯ ಮನೆಯಂಗಳದಲ್ಲಿ ಬೆಳೆಯುತ್ತಿವೆ. ಈ ನಡುವೆ ಗಿಡಗಳನ್ನು ನೆಟ್ಟ ಮಕ್ಕಳಿಗೂ ಮನೆಯವರಿಗೂ ಬಾಂಧವ್ಯ ಬೆಳೆದಿದೆ. ಕೆಲವು ಕಡೆಗಳಲ್ಲಂತೂ ನೆಟ್ಟ ಮಕ್ಕಳ ಹೆಸರನ್ನೇ ಆ ಗಿಡಕ್ಕೂ ಇಟ್ಟು ಮನೆಯವರು ಸಂಭ್ರಮಿಸಿದ್ದಾರೆ!

ಈ ನಡುವೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ಸಮಾಜಮುಖಿ ಕಾರ್ಯಕ್ಕೆ ವಿವಿಧ ಗ್ರಾಮಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಕಡೆಗಳಲ್ಲಿ ಆಯಾ ಊರಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸಹಕಾರ ನೀಡಿವೆ. ಅನೇಕ ಮನೆಯವರು ಊಟ ತಿಂಡಿಗಳನ್ನೂ ಇತ್ತು ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.