ಬೆಂಗಳೂರು: ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷವೊಂದು, ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸುವ ಅವೈಜ್ಞಾನಿಕ, ನಿರ್ಣಯದ ಮೂಲಕ ಕನ್ನಡಿಗರಿಗೆ ಹಾಗೂ ಪ್ರಾದೇಶಿಕತೆಗೆ ದ್ರೋಹ ಬಗೆದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಕನ್ನಡ ಕ್ರಿಯಾ ಸಮಿತಿ ಮೈಸೂರು ಹಾಗೂ ಕರ್ನಾಟಕ ವಿಕಾಸ ರಂಗವು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ‘ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಆತಂಕ ಮತ್ತು ನಿವಾರಣೆ’ ಕುರಿತ ಸಮಾಲೋಚನೆಯಲ್ಲಿ ಮಾತನಾಡಿದರು. ಭಾಷಾವಾರು ಪ್ರಾಂತ್ಯಕ್ಕೆ ಅನುಗುಣವಾಗಿ ಭಾಷಾನೀತಿ ಹಾಗೂ ಪ್ರಾಥಮಿಕ ಶಿಕ್ಷಣ ನೀತಿ ಇರಬೇಕು. ಪ್ರಾದೇಶಿಕ ಭಾಷೆಗಳು ಪ್ರಾಥಮಿಕ ಶಿಕ್ಷಣದಿಂದ ಮರೆಯಾದರೆ ಮುಂದೆ ಉನ್ನತ ಶಿಕ್ಷಣಕ್ಕೆ ಬರುವುದಿಲ್ಲ, ಆಡಳಿತದಲ್ಲಿರಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ, ಆಂಗ್ಲ ಮಾಧ್ಯಮ ಆರಂಭಿಸುವುದರಿಂದ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದಿದ್ದಾರೆ.