ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ಧತಿ ನಂತರ ಕಾಶ್ಮೀರದಲ್ಲಿ ಮುಷ್ಕರ, ನಿರ್ಬಂಧ ಮತ್ತು ಸಂವಹನಗಳ ಸ್ತಬ್ಧತೆಯಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ 39 ದಿನಗಳಲ್ಲಿ 23 ಸಾವಿರದ 400 ಕೋಟಿಯಷ್ಟು ನಷ್ಟ ಸಂಭವಿಸಿದೆ.
ಕೈಗಾರಿಕಾ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ ಕಾಶ್ಮೀರದಲ್ಲಿ 14 ಇಂಡಸ್ಟ್ರೀಯಲ್ ಎಸ್ಟೇಟ್ಸ್ ಹಾಗೂ 21 ಸಾವಿರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸಿಮೆಂಟ್ ಫ್ಲಾಂಟ್ಸ್, ಆಹಾರ ಸಂಸ್ಕರಣಾ ಘಟಕಗಳು, ಮರ ಸಂಬಂಧಿತ ಘಟಕಗಳು, ಹಾಲು, ಖನಿಜಯುಕ್ತ ನೀರು ಮತ್ತಿತರ ಉತ್ಪಾದನಾ ಘಟಕಗಳಿವೆ. ಸುಮಾರು 7 ಲಕ್ಷ ಕೆಲಸಗಾರರಿದ್ದಾರೆ. ಒಂದು ಲಕ್ಷ ಖಾಯಂ ಹಾಗೂ ಆರು ಲಕ್ಷ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ 5 ರಿಂದ ಎಲ್ಲಾ ರೀತಿಯ ಉತ್ಪಾದನಾ ಘಟಕಗಳು ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿವೆ. ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಪ್ರತಿದಿನ 600 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. 39 ದಿನಗಳಲ್ಲಿ ಒಟ್ಟಾರೇ 23, 400 ಕೋಟಿಯಷ್ಟು ನಷ್ಟ ಸಂಭವಿಸಿದೆ.