Thursday, January 23, 2025
ರಾಜಕೀಯ

Breaking News : 317 ಖಾತೆ, 800 ಕೋಟಿ ಆಸ್ತಿ ಪತ್ತೆ ; ಸೆ.17ರವರೆಗೆ ಇಡಿ ಕಸ್ಟಡಿಗೆ ಡಿಕೆಶಿ – ಕಹಳೆ ನ್ಯೂಸ್

ನವದೆಹಲಿ: ಅಕ್ರಮ ಹಣಕಾಸು ವ್ಯವಹಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್  ಅವರ ಇಡಿ ಕಸ್ಟಡಿ ಅವಧಿಯನ್ನು  ವಿಶೇಷ ಕೋರ್ಟ್ 4 ದಿನ ವಿಸ್ತರಿಸಿದೆ.

ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಮಧ್ಯಾಹ್ನ 3.20ಕ್ಕೆ ಇಡಿ ಅಧಿಕಾರಿಗಳು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕೆಂದು ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರೆ, ವಿಚಾರಣೆ ಪೂರ್ಣಗೊಂಡಿಲ್ಲ 5 ದಿನ ಕಸ್ಟಡಿಗೆ ನೀಡಿ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ವಾದಿಸಿದರು. ವಿಚಾರಣೆ ಸಂದರ್ಭದಲ್ಲಿ ಜಡ್ಜ್ ಸೋಮವಾರದ ಒಳಗಡೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಸೂಚಿಸಿದರು. ಎರಡು ಕಡೆ ವಾದ, ಪ್ರತಿವಾದ ಆಲಿಸಿದ ಕೋರ್ಟ್ ಡಿಕೆಶಿಯನ್ನು ಸೆ.17ರವರೆಗೆ ಇಡಿ ಕಸ್ಟಡಿಗೆ ನೀಡಿತು.

ವಾದ – ಪ್ರತಿವಾದ ಹೀಗಿತ್ತು :

ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ವಾದ ಮಂಡಿಸಿ, ವಿಚಾರಣೆ ಸಂದರ್ಭದಲ್ಲಿ ಆದಾಯದ ಮೂಲ ತೋರಿಸಿಲ್ಲ, ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ. ಬಹಳಷ್ಟು ಆಸ್ತಿಗಳನ್ನು ಬೇನಾಮಿಯಾಗಿ ಮಾಡಿದ್ದಾರೆ, ಒಟ್ಟು 317 ಬ್ಯಾಂಕ್ ಖಾತೆಯ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದು 800 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. 22 ವರ್ಷದ ಮಗಳು 108 ಕೋಟಿ ಗಳಿಸಿದ್ದಾರೆ. ತನಿಖಾ ಸಂಸ್ಥೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ 5 ದಿನಗಳ ಕಾಲ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಂದಿನ 5 ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಆರೋಪಿ ಉತ್ತರ ನೀಡುತ್ತಾರಾ ಎಂದು ಜಡ್ಜ್ ಪ್ರಶ್ನಿಸಿದರು. ಈ ಪ್ರಶ್ನೆಗೆ, ಹಲವು ದಾಖಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ಬಾಕಿಯಿದೆ ಎಂದು ನಟರಾಜ್ ಉತ್ತರಿಸಿದರು.

ಮುಂದಿನ 5 ದಿನದಲ್ಲಿ ಆರೋಪಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದು ಅನುಮಾನ. ಹೀಗಾಗಿ 5 ದಿನ ಕಸ್ಟಡಿ ಯಾಕೆ ಎಂದು ಜಡ್ಜ್ ಮರು ಪ್ರಶ್ನೆ ಹಾಕಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೇ ಆರೋಪಿಗಳ ಹೇಳಿಕೆಯನ್ನು ಆಧಾರಿಸಿ ಪ್ರಶ್ನೆ ಮಾಡಬೇಕಿದೆ ಎಂದು ಎಎಸ್‍ಜಿ ನಟರಾಜ್ ಉತ್ತರಿಸಿದರು.

ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಶಿವಕುಮಾರ್ ಅವರನ್ನು ಈಗಾಗಲೇ 100 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಲಾಗಿದೆ. ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಹೈ ಬಿಪಿಯಿಂದ ಬಳಲಿದ್ದರು. ನಾನು ಈ ಹಿಂದೆ ಕಸ್ಟಡಿಯಲ್ಲಿ ಮೃತಪಟ್ಟ ಡಿಕೆ ಬಸು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದೆ. ಅತ್ಯಂತ ಕ್ರಿಮಿನಲ್‍ಗೂ ವೈದ್ಯಕೀಯ ನೆರವು ನೀಡಲಾಗುತ್ತದೆ. ಹೀಗಾಗಿ ನನ್ನ ಕಕ್ಷಿದಾರರಿಗೂ ವೈದ್ಯಕೀಯ ನೆರವು ಈಗ ಅಗತ್ಯವಿದೆ. ಡಿಕೆ ಶಿವಕುಮಾರ್ ಅವರು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಬಾರದು. ಆಂಜನೇಯ, ಸಚಿನ್ ನಾರಾಯಣ್, ಸುನಿಲ್ ಶರ್ಮಾ ಬೇರೆ ವ್ಯಕ್ತಿಗಳು. ಅವರು ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಇಡಿ ಇವರ ಆಸ್ತಿಯೂ ಡಿಕೆ ಶಿವಕುಮಾರ್ ಅವರದ್ದು ಎಂದು ಹೇಳುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಯಾರದ್ದೋ ಆಸ್ತಿ ವಿಚಾರಣೆಗಾಗಿ ಶಿವಕುಮಾರ್ ಅವರನ್ನು ಇಡಿ ಪ್ರಶ್ನೆ ಮಾಡುವುದು ಸರಿಯಲ್ಲ. ಬಿಪಿ ಎಂಬುದು ನಾಟಕ ಮಾಡುವ ವಿಷಯವಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿಲ್ಲ. ಒಬ್ಬ ವ್ಯಕ್ತಿ ಎಷ್ಟು ಒತ್ತಡಗಳನ್ನು ಸಹಿಸಿಕೊಳ್ಳಲು ಸಾಧ್ಯ. 13 ದಿನಗಳ ನಿರಂತರ ವಿಚಾರಣೆಯಿಂದ ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದೆ. ಕಕ್ಷಿದಾರರ 22 ವರ್ಷದ ಪುತ್ರಿಯನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಶಿವಕುಮಾರ್ ಏನು ಮುಚ್ಚಿಡುವುದಿಲ್ಲ. ಎಲ್ಲಿಗೂ ಓಡಿ ಹೋಗುವುದಿಲ್ಲ. ವಿಚಾರಣೆಗೆ ಬೇಕೆಂದಾಗ ಹಾಜರಾಗುತ್ತಾರೆ ಎಂದು ಕೋರ್ಟ್ ಗಮನಕ್ಕೆ ತಂದರು.

ಈ ವೇಳೆ ಡಿಕೆಶಿ, ನನಗೆ ಹೈ ಬಿಪಿ, ಥೈರಾಯ್ಡ್, ಹೈ ಶುಗರ್ ಇದೆ. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿಕೊಂಡರು.

ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ಬಳಿಕ ಆದೇಶ ಕಾಯ್ದಿರಿಸಿ ಸಂಜೆ 5:05ರ ವೇಳೆ ನ್ಯಾಯಾಧೀಶರು ಚೇಂಬರ್ ಕಡೆ ನಡೆದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇಡಿ ನನ್ನ ಬಳಿ 317 ಖಾತೆ ಇದೆ ಎಂದು ಆರೋಪಿಸುತ್ತಿದೆ. ನನ್ನ ಬಳಿ ಇರುವ ಎಲ್ಲ ಖಾತೆಯ ವಿವರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇನೆ. 317 ಖಾತೆ ಇದ್ದರೆ ಎಲ್ಲವನ್ನೂ ಜಾರಿ ನಿರ್ದೇಶನಾಲಯಕ್ಕೆ ಬರೆದು ಕೊಡುತ್ತೇನೆ ಎಂದು ತಿಳಿಸಿದರು.

ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಶಿವಕುಮಾರ್ ಅವರನ್ನು ಸೆ.3 ರಂದು ಇಡಿ ಬಂಧಿಸಿ ಸೆ.4 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ವೇಳೆ ಡಿಕೆ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಜಾಮೀನು ಮಂಜೂರು ಮಾಡಬೇಕೆಂದು ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದ್ದರು. ಆದರೆ ಇವರ ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಸೆ.13 ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತ್ತು.

ವರದಿ ಕೃಪೆ : ಪ್ರಶಾಂತ್ ದೆಹಲಿ ( ಪತ್ರಕರ್ತ)