Thursday, January 23, 2025
ಸುದ್ದಿ

ಮೊಬೈಲ್‌ ವಾಪಸ್‌ ನೀಡದೆ ಸತಾಯಿಸುತ್ತಿದ್ದ ಕಾರಣಕ್ಕೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ – ಕಹಳೆ ನ್ಯೂಸ್

ಬೆಂಗಳೂರು:  ಮೊಬೈಲ್‌ ವಾಪಸ್‌ ನೀಡದೆ ಸತಾಯಿಸುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಸಿಟಿ ಮಾರುಕಟ್ಟೆಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಟ್ಯಾನರಿ ರಸ್ತೆ ನಿವಾಸಿ ಮೆಹಬೂಬ್‌ (30) ಕೊಲೆಯಾದ ದುರ್ದೈವಿ. ಘಟನೆ ಸಂಬಂಧ ಆರೋಪಿಗಳಾದ ಕೆ.ಜಿ.ಹಳ್ಳಿಯ ಸದ್ದಾಂ (27) ಮತ್ತು ರಿಜ್ವಾನ್‌ (35) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ತುಮಕೂರು ಜಿಲ್ಲೆಯ ಮೆಹಬೂಬ್‌, ಸಿ.ಟಿ. ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಆಟೋ ಚಾಲಕ ಸದ್ದಾಂ ಹಾಗೂ ಬಾಣಸಿಗನಾಗಿರುವ ರಿಜ್ವಾನ್‌, ಮೊಹಬೂಬ್‌ಗೆ ಹಲವು ವರ್ಷಗಳ ಸ್ನೇಹಿತರಾಗಿದ್ದರು. ಒಂದು ತಿಂಗಳ ಹಿಂದೆ ಮೆಹಬೂಬ್‌ ತನ್ನ ಸ್ನೇಹಿತ ಸದ್ದಾಂ ಬಳಿ ಕೆಲ ದಿನಗಳ ಮಟ್ಟಿಗೆ ಮೊಬೈಲ್‌ ಬೇಕೆಂದು ಪಡೆದುಕೊಂಡಿದ್ದ. ಮೊಬೈಲ್‌ ವಾಪಸ್‌ ನೀಡದೆ ಮೆಹಬೂಬ್‌, ಸದ್ದಾಂಗೆ ಸತಾಯಿಸುತ್ತಿದ್ದ. ಈ ನಡವಳಿಕೆಯಿಂದ ಮೆಹಬೂಬ್‌ ಮೇಲೆ ಸದ್ದಾಂ ಆಕ್ರೋಶಗೊಂಡಿದ್ದ. ಮೊಬೈಲ್‌ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಮೆಹಬೂಬ್‌ ಕೆ.ಆರ್‌. ಮಾರುಕಟ್ಟೆಯ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ನಿಂತಿದ್ದಾಗ ಸದ್ದಾಂ ಮತ್ತು ಬಾಣಸಿಗ ರಿಜ್ವಾನ್‌ ಬಂದು ಮೊಬೈಲ್‌ ಕೇಳಿದ್ದಾರೆ. ಮೆಹಬೂಬ್‌ ಮೊಬೈಲ್‌ ಇಲ್ಲ ಎಂದು ಹೇಳಿದ್ದು, ಆರೋಪಿಗಳು ಮೆಹಬೂಬ್‌ಗೆ ಥಳಿಸಿದ್ದಾರೆ. ಈ ವೇಳೆ ಆರೋಪಿ ಸದ್ದಾಂ, ಮೆಹಬೂಬ್‌ ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಮೆಹಬೂಬ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ರಾತ್ರಿ 8 ಗಂಟೆ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಹಬೂಬ್‌ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.