ತುಮಕೂರು– ಖಾಸಗಿ ಸಂಸ್ಥೆಗೆ ಸೇರಿದ ಸ್ಲೀಪರ್‍ಕೋಚ್ ಬಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಇಬ್ಬರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಬೆಂಕಿ ದುರಂತದಲ್ಲಿ ಗಂಭೀರ ಗಾಯಗೊಂಡಿರುವ ಗುಲ್ಬರ್ಗ ನಿವಾಸಿ ನೀಲಮ್ಮ ಹಿರೇಮಠ(55) ಹಾಗೂ ಬಸ್ ಚಾಲಕ(ಹೆಸರು ತಿಳಿದುಬಂದಿಲ್ಲ)ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಯಾದಗಿರಿ ಹುಣಸಗಿಯ ನಿವಾಸಿ ಪ್ರಸಾದ್(31), ಬಿಜಾಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ತೌಸೀಫ್(21), ಮೆಹಬೂಬ್ ಪಾಷ(25), ಶಬ್ಬೀರ(27) ಮತ್ತಿತರರಿಗೆ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬಿಜಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರಾಯಲ್ ಟ್ರಾನ್ಸ್ ಪೋರ್ಟ್ ಕಂಪನಿಗೆ ಸೇರಿದ ಸ್ಲೀಪರ್‍ಕೋಚ್ ಬಸ್‍ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರಿನ ಕೋರಾ ಬಳಿ ಇಂಜಿನ್‍ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಸುಟ್ಟ ವಾಸನೆ ಬರುತ್ತಿದೆ ಎಂದು ಚಾಲಕರ ಗಮನಕ್ಕೆ ತಂದಿದ್ದಾರೆ.ಆದರೆ ಚಾಲಕ ಉದಾಸೀನ ತೋರಿ ಏನೂ ಆಗಿಲ್ಲವೆಂದು ಬಸ್‍ನ್ನು ಚಾಲನೆ ಮಾಡಿಕೊಂಡು ಕೋರಾದಿಂದ ಸುಮಾರು 12 ಕಿ.ಮೀ ದೂರ ಬಂದಾಗ ಮುಂಜಾನೆ 4.30ರ ಸಮಯದಲ್ಲಿ ಇಂಜಿನ್‍ನಲ್ಲಿ ದಟ್ಟ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ.
ತಕ್ಷಣ ಚಾಲಕ ಬಸ್‍ನ್ನು ರಸ್ತೆಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ಹೇಳುವಷ್ಟರಲ್ಲಿ ಬೆಂಕಿ ಪೂರ್ತಿ ಬಸ್‍ನ್ನು ಆವರಿಸಿಕೊಂಡಿದೆ. ಹಲವು ಪ್ರಯಾಣಿಕರು ಬಸ್‍ನ ಗಾಜುಗಳನ್ನು ಒಡೆದು ಧುಮುಕಿದರೆ, ಕೆಲವರು ಧುಮುಕಲು ಸಾಧ್ಯವಾಗದೆ ಇಳಿಯುವಾಗ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಬಸ್‍ನಲ್ಲಿದ್ದ ಪ್ರಯಾಣಿಕರು ನಮ್ಮನ್ನು ಕಾಪಾಡಿ ಎಂದು ಚೀರುತ್ತಿದ್ದಾಗ ಸ್ಥಳೀಯ ನಿವಾಸಿಗಳು ಕೇಳಿಸಿಕೊಂಡು ತಕ್ಷಣ ಮನೆಯಿಂದ ಹೊರಗೆ ಓಡಿಬಂದು ಪ್ರಯಾಣಿಕರನ್ನು ರಕ್ಷಿಸಿ ಅವರಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮರೆದಿದ್ದಾರೆ.
ಮಾರ್ಗಮಧ್ಯೆ ಬಸ್‍ನಲ್ಲಿ ಸುಟ್ಟ ವಾಸನೆ ಬರುತ್ತಿದ್ದರಿಂದ ನಿದ್ರೆಯಲ್ಲಿದ್ದವರೆಲ್ಲ ಎದ್ದಿದ್ದರು. ಈ ಕಾರಣದಿಂದಾಗಿ ಬಸ್‍ನಲ್ಲಿ ಬೆಂಕಿ ಆವರಿಸುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದು ಹೊರಗೆ ಬರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಪ್ರಯಾಣಿಕರು ನಿದ್ರೆಗೆ ಜಾರಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ನೋಡ ನೋಡುತ್ತಿದ್ದಂತೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಧುಸೂದನ್, ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪೀಣ್ಯದ ಬಳಿ ಹಾಗೂ ಆಂಧ್ರಪ್ರದೇಶ ಹುಬ್ಬಳ್ಳಿ ಧಾರವಾಡ ಸೇರಿದಂತೆ ಇತರ ಕಡೆ ಸರಕಾರಿ ಬಸ್ ಹಾಗೂ ಖಾಸಗಿ ಬಸ್ಸುಗಳಿಗೆ ಎಸಿ ಗಳಲ್ಲಿ ಲೋಪದೋಷ ಕಂಡು ಬಂದು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲಿಗೆಗೆ ಬಸ್ಸುಗಳು ಆಹುತಿಯಾಗಿದ್ದವು ಈ ಮಾಹಿತಿಯಲ್ಲಿ ಹಲವಾರು ಪ್ರಯಾಣಿಕರು ದಾರುಣ ಸಾವನ್ನು ಅನುಭವಿಸಿದ್ದರು.
ಆ ಘಟನೆಗಳು ಮಾಸುವ ಬೆನ್ನಲ್ಲೇ ಈಗ ತುಮಕೂರಿನಲ್ಲಿ ಈ ಘಟನೆ ನಡೆದಿರುವುದು ರಾತ್ರಿ ವೇಳೆ ಖಾಸಗಿ ಐಷಾರಾಮಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸುವುದು ಸೂಕ್ತ ಎಂದು ಪ್ರಯಾಣಿಕರು ಅಭಿಮತ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಇಲ್ಲಿನ ಸಬ್ ಇನ್ಸ್ ಪೆಕ್ಟರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ಕೋನಾ ವಂಶಿಕೃಷ್ಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ ತುಮಕೂರು ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ವೃತ್ತ ನಿರೀಕ್ಷಕ ಮಧುಸೂದನ್ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.