ಡಿ.ಕೆ.ಶಿ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷರ ಬಗ್ಗೆ ಅಸಂಬದ್ಧ ಮಾತು; ಯುವ ಒಕ್ಕಲಿಗ ಸಮಿತಿಯಿಂದ ಖಂಡನೆ – ಕಹಳೆ ನ್ಯೂಸ್
ದಿನಾಂಕ 12/09/2019 ರಂದು ಕಡಬ ಪೇಟೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಡಿ.ಕೆ.ಶಿ ಅಭಿಮಾನಿಗಳು ಎಂಬ ಶಿರೋನಾಮದಡಿ ಡಿ.ಕೆ.ಶಿ ಬಂಧನದ ವಿರುದ್ಧ ರಾಜಕೀಯ ವ್ಯಕ್ತಿಗಳು ಪ್ರತಿಭಟನಾ ಸಭೆ ನಡೆಸಿದ್ದು, ಈ ಪ್ರತಿಭಟನಾ ಸಭೆಯಲ್ಲಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರ ಬಗ್ಗೆ ಅಸಂಬದ್ಧ ಮಾತುಗಳನ್ನಾಡಿದ ಸುಳ್ಯದ ಎಂ.ವೆಂಕಪ್ಪ ಗೌಡ ಅವರ ದುರ್ವರ್ತನೆಯನ್ನು ಕಡಬ ವಲಯದ ಯುವ ಒಕ್ಕಲಿಗರ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಡಬ ಯುವ ಒಕ್ಕಲಿಗರ ಘಟಕದ ಅಧ್ಯಕ್ಷ ಮೋಹನ್ ಕೋಡಿಂಬಾಳ ಹೇಳಿದರು.
ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು ಕಡಬದಲ್ಲಿ ಡಿ.ಕೆ.ಶಿ ಬಂಧನದ ವಿರುದ್ಧ ಪ್ರತಿಭಟನೆ ನಡೆಸಲು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗೌಡ ಸಮುದಾಯದ ನಾಲ್ಕೈದು ಮಂದಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಹಾಗೂ ಡಿ.ಕೆ.ಶಿ ಅಭಿಮಾನಿ ಬಳಗ ಎಂಬ ಹೆಸರಿಟ್ಟು ಪ್ರತಿಭಟನೆ ನಡೆಸುವುದಾಗಿ ಅಲ್ಲದೆ ಒಕ್ಕಲಿಗ ಸಂಘದಿಂದ ಪ್ರತಿಭಟನೆ ಎಂದು ವ್ಯಾಪಕ ಪ್ರಚಾರ ನಡೆಸಿದ್ದರು.
ಈ ವಿಚಾರವು ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡರ ಗಮನಕ್ಕೆ ಬಂದಾಗ ಸಂಘದ ತತ್ವ ಸಿದ್ದಾಂತ ಹಾಗು ಗೌಡ ಸಮುದಾಯದ ಹಿತದೃಷ್ಟಿಯಿಂದ ಸೆ 12 ರಂದು ನಡೆಯುವ ಪ್ರತಿಭಟನೆಗೆ ಸಂಘದ ಬೆಂಬಲವಿಲ್ಲ, ನಮಗೂ ಆ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಮರುದಿನ ಪ್ರತಿಭಟನೆ ನಡೆದಿದ್ದು ಈ ಸಂದರ್ಭದಲ್ಲಿ ಅಧ್ಯಕ್ಷರ ಮಾತಿಗೆ ಸಮಾಜ ಭಾಂದವರು ಕೈ ಜೋಡಿಸಿ ಪ್ರತಿಭಟನೆಗೆ ಯಾರು ಬಂದಿರಲಿಲ್ಲ, ಇದರಿಂದ ಇರಿಸು ಮುರಿಸುಗೊಂಡು ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಭಾಷಣಕಾರಲ್ಲಿ ಇಲ್ಲ ಸಲ್ಲದ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಸಂಘದ ಅಧ್ಯಕ್ಷರ ಬಗ್ಗೆ ಅಸಂಬದ್ಧ ಮಾತುಗಳನ್ನು ಆಡಿಸಿದ್ದಾರೆ ಎಂದು ದೂರಿದರು.
ಇನ್ನು ಭಾಷಣ ಮಾಡಿದ ವೆಂಕಪ್ಪ ಗೌಡರ ಬಗ್ಗೆ ಮಾತನಾಡಿದ ಅವರು ಪ್ರಜ್ಞಾವಂತರಾಗಿ ಇರಬೇಕಾದ ಕ್ರಿಮಿನಲ್ ನ್ಯಾಯವಾದಿ ಎಂದೆನಿಸಿಕೊಂಡಿರುವ ನೀವು ನಿಮ್ಮ ಕ್ರಿಮಿನಲ್ ಬುದ್ಧಿಯನ್ನು ತೋರಿಸಿ ಬಾಯಿಗೆ ಬಂದಂತೆ ತನ್ನದೆ ಸಮಾಜದ ನಾಯಕರನ್ನು, ಸಂಘಟನೆಯನ್ನು ನಿಂದಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ, ನಿಮ್ಮಿಂದ ನಾವು ಕಲಿಯಬೇಕಾಗಿರುವುದು ಏನು ಇಲ್ಲ ಎಂಬುದನ್ನು ಮನಗಾಣಬೇಕು. ನಿಮ್ಮ ಇಂತಹ ರಣಹೇಡಿ ಮಾತುಗಳಿಂದ ಕಡಬದ ಗೌಡ ಸಂಘಟನೆ ಹಾಗೂ ಸಮಾಜ ಬಾಂಧವರು ವಿಚಾಲಿತರಾಗುವುದಿಲ್ಲ. ನಿಮಗೆ ತಪ್ಪು ಮಾಹಿತಿ ನೀಡಿದ ಕಡಬದ ನಿಮ್ಮ ಹಿತೈಷಿಗಳ ಕರೆಗೆ ಓಗೊಟ್ಟು ಎಷ್ಟು ಜನ ಗೌಡ ಬಾಂಧವರು ಪ್ರತಿಭಟನೆಗೆ ಬಂದಿದ್ದಾರೆ ಎಂಬುದನ್ನು ನೀವು ಒಮ್ಮೆ ತಲೆ ಎತ್ತಿ ನೋಡುತ್ತಿದ್ದರೆ ಎಲ್ಲವೂ ಅರ್ಥವಾಗುತ್ತಿತು ಎಂದರು.
ಕಡಬ ಗೌಡ ಸಂಘಟನೆ ತಮ್ಮಯ್ಯ ಗೌಡರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡಿದೆ ಇನ್ನಾದರೂ ಇಂತಹ ಮಾತುಗಳನ್ನಾಡಿ ಸಮಾಜದ ವ್ಯವಸ್ಥೆಗೆ ಮಾರಕವಾಗಬೇಡಿ, ರಾಜಕೀಯ ಮಾಡಿ ಏನು ಬೇಕಾದರೂ ಮಾಡಿ ನಮಗೆನು ಅದರಿಂದ ಬೇಜಾರಿಲ್ಲ, ಅದು ನಿಮ್ಮ ವೈಯಕ್ತಿಕ ವಿಚಾರ, ಇನ್ನಾದರೂ ಸಮಾಜದ ಅಭಿವೃದ್ದಿಗೆ ಪ್ರಯತ್ನಿಸಿ ಎಂದು ಈ ಮೂಲಕ ನಿಮಗೆ ತಿಳಿಯಪಡಿಸುತ್ತಿದ್ದೆವೆ. ಇನ್ನು ಮುಂದೆ ಕಡಬಕ್ಕೆ ಬಂದು ಗೌಡ ಸಮಾಜದ ನಾಯಕರ ಬಗ್ಗೆ, ಸಂಘದ ಬಗ್ಗೆ ಮಾತನಾಡಿದರೆ ಸರಿಯಾದ ಪಾಠ ಕಳುಸುತ್ತೇವೆ ಎಂಬುದು ನಿಮಗೆ ನೆನಪಿರಲಿ ಎಂದು ಎಚ್ಚರಿಸಿದರು.
ಈ ವೇಳೆ ರಾಧಾಕೃಷ್ಣ ಗೌಡ ಕೋಲ್ಪೆ, ತಿರ್ಥೇಶ್ ಗೌಡ ಕೊರಂದೂರು,ಗಿರೀಶ್ ಗೌಡ ಕೊರಂದೂರು,ಜಯರಾಂ ಗೌಡ ಆರ್ತಿಳ, ನಾರಾಯಣ ಗೌಡ ಕೊಳ್ಳಿಮಾರವರು ಉಪಸ್ಥಿತರಿದ್ದರು.