ಪುತ್ತೂರು: ಶಿಸ್ತಿನಿಂದ ಕೂಡಿದ ಪ್ರಾಮಾಣಿಕ ಜೀವನ ಯಶಸ್ಸಿನ ತಳಹದಿ. ಶಿಸ್ತು ಮಾನವನ ನಡೆವಳಿಕೆಯಲ್ಲಿ ಬಿಂಬಿತವಾಗಿರುವ ಬಹು ಮುಖ್ಯ ಅಂಶ. ಮಕ್ಕಳು ಎಳವೆಯಿಂದಲೇ ಶಿಸ್ತನ್ನು ಮೈಗೂಡಿಸುವಲ್ಲಿ ಹೆತ್ತವರು ಪ್ರಮುಖ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿಸ್ತು ಅನ್ನುವುದು ಇತರರು ನಮಗೆ ಹೇಳಿ ಬರುವಂತದ್ದಲ್ಲ, ಅದನ್ನು ನಾವಾಗಿಯೇ ರೂಢಿಸಿಕೊಳ್ಳಬೇಕು. ಇದು ಬದುಕಿನ ಅಂತರಂಗ ಮತ್ತು ಬಹಿರಂಗದಲ್ಲಿ ಸಮಾನವಾಗಿರಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಧುಸೂದನ ಎನ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಪದವಿ ಸಮಾಜ ಕಾರ್ಯ ವಿಭಾಗ ಮತ್ತು ದಕಜಿಪ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿ, ಕೃಷ್ಣ ನಗರ ಇದರ ಸಹಯೋಗದಲ್ಲಿ ಸೆಪ್ಟೆಂಬರ್ 12ರಂದು ಶಾಲಾ ಸಭಾಂಗಣದಲ್ಲಿ ‘ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ’ ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾದ ಮಾಹಿತಿ ಕಾರ್ಯಕ್ರಮದಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು. ವಿದ್ಯಾರ್ಥಿಗಳು ಸುವಿಚಾರಗಳೆಡೆಗೆ ಆದ್ಯತೆ ನೀಡುವ ಮೂಲಕ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ಕೆಟ್ಟ ಯೋಚನೆಗಳ ಕುರಿತು ಆಲೋಚಿಸುವ ಮನಃಸ್ಥಿತಿಯಿಂದ ದೂರವಿರಬೇಕು. ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆ, ಸಮಯಪ್ರಜ್ಞೆ ಮುಂತಾದ ಉತ್ತಮ ಅಂಶಗಳಿಗೆ ಮನ್ನಣೆ ನೀಡಬಲ್ಲ ವಿದ್ಯಾರ್ಥಿ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ರೋಸ್ಲಿ ಡಯಾಸ್ ಮಾತನಾಡಿ, ಶಿಸ್ತು ಮಾನವನ ಪರಿಪೂರ್ಣ ಬದುಕಿಗೆ ಪೂರಕವಾಗಿರುವ ಬಹು ಮುಖ್ಯ ಅಂಶ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಸಂದರ್ಭದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದಲ್ಲಿ ಮುಂದಿನ ಬದುಕು ಫಲಪ್ರದವಾಗಬಲ್ಲುದು ಎಂದರು.
ಕಾಲೇಜಿನ ಪದವಿ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದೀಪಿಕಾ ಸನಿಲ್ ಗೌರವ ಅತಿಥಿಯಾಗಿ ಭಾಗವಹಿಸಿದರು.
ಸಭಾಧ್ಯಕ್ಷತೆ ವಹಿಸಿದ ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ಕೆ ಚೆನ್ನಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ಗುಣ ನಡತೆಗಳನ್ನು ಹೊಂದುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯ. ಶಿಸ್ತು, ಪ್ರಾಮಾಣಿಕೆ, ಪ್ರಯತ್ನ, ಪರಿಶ್ರಮ ಮೊದಲಾದವುಗಳು ಬಹಳ ಅಗತ್ಯದ ಅಂಶಗಳು. ಮೌಲ್ಯಯುತ ಅಂಶಗಳನ್ನು ಉಪೇಕ್ಷಿಸುವುದು ಎಂದಿಗೂ ಸರಿಯಲ್ಲ. ಉತ್ತಮ ಮೌಲ್ಯಗಳೇ ಬದುಕಿನ ದಿಕ್ಕನ್ನು ನಿರ್ಧರಿಸುತ್ತವೆ ಎಂದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಬಿಎಸ್‍ಡಬ್ಲ್ಯೂ ವಿದ್ಯಾರ್ಥಿಗಳಾದ ಡೇವಿಡ್ ಜಾನ್ಸನ್ ಸ್ವಾಗತಿಸಿ, ಅಹಮ್ಮದ್ ಅಝಿಲ್ ಅಬುಬಕ್ಕರ್ ವಂದಿಸಿ, ಅಮಿತ್ ಸನ್ನಿ ಅರನ್ನ ಕಾರ್ಯಕ್ರಮ ನಿರೂಪಿಸಿದರು.