ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಗಳನ್ನು ತಡೆಯುವ ಸಲುವಾಗಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಅಕ್ಟೋಬರ್ ವರೆಗೂ ಗಡುವು ನೀಡಿದ್ದಾರೆ. ಮಾಲ್ ಗಳು, ಸೂಪರ್ ಮಾರುಕಟ್ಟೆ, ಹೋಟೆಲ್, ರೆಸ್ಟೋರೆಂಟ್ ಗಳು ಪ್ಲಾಸ್ಟಿಕ್‍ಗಳನ್ನು ಅತೀ ಹೆಚ್ಚು ಬಳಕೆ ಮಾಡುತ್ತಿದ್ದು, ಕೂಡಲೇ ಬಳಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಹೆಚ್ಚಿನ ದಂಡ ತೆರಬೇಕಾಗುತ್ತದೆ ಎಂದು ಮೇಯರ್ ಎಚ್ಚರಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಸಂಪೂರ್ಣ ನಿಯಂತ್ರಣಕ್ಕೆ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಮಾರುಕಟ್ಟೆ ಅಂಗಡಿಗಳಲ್ಲಿ ವ್ಯಾಪಾರಿಗಳು ಗ್ರಾಹಕರಿಗೆ ಪ್ಲಾಸ್ಟಿಕ್ ಕೈ ಚೀಲದಲ್ಲಿ ಉತ್ಪನ್ನಗಳನ್ನು ನೀಡಬಾರದು ಎಂದು ಸೂಚಿಸಲಾಗಿದೆ. ಹೋಟೆಲ್ ಗಳಲ್ಲಿ ಆಹಾರ ಪಾರ್ಸೆಲ್ ನೀಡಲು ಕಬ್ಬಿನ ತ್ಯಾಜ್ಯದಿಂದ ಉತ್ಪಾದಿಸಿ ಬಾಕ್ಸ್‍ಗಳನ್ನು ಬಳಸುವಂತೆ ತಿಳಿಸಲಾಗಿದೆ. ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಉತ್ನನ್ನ ಬಳಸುವವರಿಗೆ ವಿಧಿಸುವ ದಂಡ ಹೆಚ್ಚಿಸುವುದು, ಉದ್ದಿಮೆ, ವ್ಯಾಪಾರ ಪರವಾನಗಿ ರದ್ದು ಪಡಿಸುವ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.