ಮಂಗಳೂರು: ಜನರಿಗೆ ಸರಕಾರಿ ಸೇವೆಗಳು ಸುಲಭವಾಗಿ ಸಿಗಬೇಕು ಎಂಬ ಉದ್ದೇಶದಿಂದ ಕರಾವಳಿಯಲ್ಲಿ ಎಂಟು ಹೊಸ ತಾಲೂಕುಗಳನ್ನು ಘೋಷಿಸಿ ಉದ್ಘಾಟಿಸಲಾಗಿದೆ. ಆದರೆ ಅನುದಾನ, ಸಿಬಂದಿ ನೇಮಕ, ಆವಶ್ಯಕ ಕಾರ್ಯಗಳನ್ನು ತುರ್ತಾಗಿ ಕೈಗೆತ್ತಿಗೂಳ್ಳುವುದಕ್ಕೆ ಸರಕಾರ ನಿರಾಸಕ್ತಿ ತೋರಿರುವುದರಿಂದ, ಹೊಸ ತಾಲೂಕುಗಳು ನಾಮಫಲಕಕ್ಕಷ್ಟೇ ಸೀಮಿತವಾಗಿವೆ.
ಮೂಡುಬಿದಿರೆ, ಕಡಬ ಮತ್ತು ಮೂಲ್ಕಿ ತಾಲೂಕಿಗೆ ತಹಶೀಲ್ದಾರ್ ನೇಮಕವಾಗಿದೆ. ಮೂಡುಬಿದಿರೆ, ಕಡಬ ಮಿನಿವಿಧಾನಸೌಧಗಳಿಗೆ ಹಣ ಮಂಜೂರಾಗಿದ್ದರೆ, ಮೂಲ್ಕಿಗೆ ಜಾಗ ಗುರುತಿಸಲಾಗಿದೆ. ಉಳ್ಳಾಲ ತಾಲೂಕು ಘೋಷಣೆಯಾಗಿರುವುದು ಮಾತ್ರ. ಉಡುಪಿ ಜಿಲ್ಲೆಯ ಹೊಸ ಹೆಬ್ರಿ, ಕಾಪು, ಬ್ರಹ್ಮಾವರ, ಬೈಂದೂರು ತಾಲೂಕುಗಳಿಗೂ ತಹಶೀಲ್ದಾರ್ ನೇಮಕವಾಗಿ ಅಲ್ಪಸ್ವಲ್ಪ ಕೆಲಸ ನಡೆದದ್ದು ಬಿಟ್ಟರೆ ಬೇರೇನೂ ಆಗಿಲ್ಲ.
ಒಂದು ಪೂರ್ಣಮಟ್ಟದ ತಾಲೂಕು ಅನುಷ್ಠಾನವಾಗಲು ತಹಶೀಲ್ದಾರ್, ಮೂವರು ಉಪ ತಹಶೀಲ್ದಾರರು, ನಾಲ್ವರು ಪ್ರಥಮ ದರ್ಜೆ ಮತ್ತು 8 ದ್ವಿತೀಯ ದರ್ಜೆ ಗುಮಾಸ್ತರು, ಇಬ್ಬರು ಅಟೆಂಡರ್, ನಾಲ್ವರು ಕಂಪ್ಯೂಟರ್ ಆಪರೇಟರ್‍ಗಳ ಅವಶ್ಯಕತೆಯಿದೆ. ಶಿಕ್ಷಣಾಧಿಕಾರಿ, ಖಜಾನಾಧಿಕಾರಿ, ಕೃಷಿ, ತೋಟಗಾರಿಕೆ, ಪಿಡಿಬ್ಲುಡಿ ಸಹಿತ ಹಲವು ಇಲಾಖೆಗಳ ಅಧಿಕಾರಿಗಳು ಅಲ್ಲಿ ಕಾರ್ಯನಿರ್ವಹಿಸಬೇಕು.