ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ಆಯೋಜಿಸಿದ ರಾಷ್ಟ್ರ ಮಟ್ಟದ ಮ್ಯಾನೆಜ್‍ಮೆಂಟ್ ಫೆಸ್ಟ್ ಫ್ಯಾಕುಲಾ 2019 ‘ಮೋನಾರ್ಚ್’- ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಯೋ ನಿವೃತ್ತಿಯನ್ನು ಹೊಂದಲಿರುವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಪ್ರೊ. ಮ್ಯಾಕ್ಸಿಂ ಕಾರ್ಲ್ ಇವರನ್ನು ಸನ್ಮಾನಿಸಿತು.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ರಾಧಾಕೃಷ್ಣ ಗೌಡ ಅಭಿನಂದನಾ ಮಾತುಗಳನ್ನಾಡಿ, 1984 ರಲ್ಲಿ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಪ್ರೊ. ಮ್ಯಾಕ್ಸಿಂ ಕಾರ್ಲ್ ಇವರು ತನ್ನ ಸುದೀರ್ಘ ಅವಧಿಯ ವೃತ್ತಿ ಬದುಕಿನಲ್ಲಿ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶಿಸ್ತು, ಪ್ರಾಮಾಣಿಕತೆ, ಸಂಘಟನೆ, ಅಧ್ಯಯನಶೀಲತೆಗೆ ಹೆಸರು ಮಾಡಿರುವ ಇವರು ಹಲವಾರು ವಾಣಿಜ್ಯಶಾಸ್ತ್ರ ಪಠ್ಯ ಪುಸ್ತಕಗಳನ್ನು ರಚಿಸಿರುತ್ತಾರೆ. ಇವರ ಭೋಧನಾ ಶೈಲಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಮಹತ್ವಪೂರ್ಣ ಪರಿಣಾಮ ಬೀರಿದೆ ಎಂದು ಹೇಳಿ, ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಭೋಧನಾ ವೃತ್ತಿಯಲ್ಲಿ ಅತ್ಯುತ್ತಮ ಹೆಸರು ಗಳಿಸಿರುವ ಪ್ರೊ. ಮ್ಯಾಕ್ಸಿಂ ಕಾರ್ಲ್ ಇವರು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿಯೂ ಬಹಳಷ್ಟು ಸಹಕಾರ ನೀಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ರೈ, ಪುಷ್ಪಾ ಎನ್, ಅಭಿಷೇಕ್ ಸುವರ್ಣ, ಹರ್ಷಿತ್ ಆರ್ ಮತ್ತು ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಅಧ್ಯಕ್ಷೆ ಫಾತಿಮತ್ ಫೈಜ್ಹಾ ಉಪಸ್ಥಿತರಿದ್ದರು.