ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 8.62 ಲಕ್ಷ ಬಿಪಿಎಲ್ ಮಂದಿ ಇದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಂಕಿ ಅಂಶ ಪ್ರಕಾರ ಅನ್ಯ ಅಂತ್ಯೋದಯ ಯೋಜನೆಯಡಿ ರೇಷನ್ ಕಾರ್ಡು ಹೊಂದಿರುವ ಕುಟುಂಬಗಳ ಸಂಖ್ಯೆ 12 ಸಾವಿರದ 460. ಜಿಲ್ಲೆಯಲ್ಲಿ ಒಟ್ಟಾರೆ 44 ಸಾವಿರದ 36 ಮಂದಿ ಸರ್ಕಾರದಿಂದ 25 ಕೆಜಿ ಅಕ್ಕಿ, 10ಕೆಜಿ ರಾಗಿ ಅಥವಾ 35 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 2 ಲಕ್ಷದ 52 ಸಾವಿರದ 765 ಬಿಪಿಎಲ್ ಕುಟುಂಬಗಳಿದ್ದು 8 ಲಕ್ಷದ 19 ಸಾವಿರದ 641 ಮಂದಿ ಸರ್ಕಾರದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆ 11.40 ಲಕ್ಷ. ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳ ಸಂಖ್ಯೆ 8.63 ಲಕ್ಷ ಅಂದರೆ ಶೇಕಡಾ 75ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.
ಬಿಪಿಎಲ್ ಕಾರ್ಡು ಪಡೆಯಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷವಿರಬೇಕು. ಕಂದಾಯ ಇಲಾಖೆ ಸಮಗ್ರವಾಗಿ ಕುಟುಂಬದ ಆರ್ಥಿಕ ಹಿನ್ನಲೆ ಪರಿಶೀಲಿಸಿ ಬಿಪಿಎಲ್ ಕಾರ್ಡು ನೀಡಬೇಕು. ಬಿಪಿಎಲ್ ಕಾರ್ಡು ನೀಡಿದ ನಂತರ ಕೂಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿ ಅನಧಿಕೃತವಾಗಿ ಬಿಪಿಎಲ್ ಕಾರ್ಡು ಪಡೆದಿದ್ದರೆ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು.