ಉಡುಪಿ: ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪ್ರಧಾನ ಜನೌಷಧ ಕೇಂದ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಔಷಧಗಳು ಮಾರಾಟವಾಗುತ್ತಿದ್ದು, ಪ್ರತಿ ತಿಂಗಳು 4ರಿಂದ 5 ಕೋ.ರೂ. ವ್ಯವಹಾರವಾಗುತ್ತಿದೆ ಎಂದು ರಾಜ್ಯ ಜನೌಷಧದ ನೋಡಲ್ ಅಧಿಕಾರಿ ಡಾ| ಅನಿಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 2,600 ಪಿಎಂಜೆ ಕೇಂದ್ರಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ 540 ಕೇಂದ್ರಗಳಿವೆ. ಅವಿಭಜಿತ ದ.ಕ ಜಿಲ್ಲೆಯಲ್ಲಿನ ಕೇಂದ್ರಗಳು ಅತ್ಯಧಿಕ ಪ್ರಮಾಣದಲ್ಲಿ ಜನರಿಕ್ ಔಷಧಗಳನ್ನು ಖರೀದಿಸುತ್ತಿವೆ.ಔಷಧ ಗುಣಮಟ್ಟದ ಬಗ್ಗೆ ಸಾಕಷ್ಟು ಪರೀಕ್ಷೆಗಳಾಗಿವೆ. ಯಾವುದೇ ಲೋಪ ಸಿಕ್ಕಿಲ್ಲ ಎಂದರು.
ಕೇಂದ್ರದ ಔಷಧಗಳು ಕಾಳಸಂತೆ ಯಲ್ಲಿ ಮಾರಾಟವಾಗುತ್ತಿವೆ ಎನ್ನುವ ಆರೋಪಗಳಿವೆ. ಆದರೆ ಇದರಲ್ಲಿ ಸತ್ಯಾಂಶವಿಲ್ಲ. ಜನೌಷಧ ಕೇಂದ್ರಗಳಿಗೆ ವಿತರಣೆಯಾಗುವ ಪ್ರತಿಯೊಂದು ಔಷಧವೂ ಮಂಗಳೂರು ಹಾಗೂ ಮೈಸೂರಿನ ವಿತರಕರಿಂದ ದೇಶಾದ್ಯಂತ ವಿತರಣೆಯಾಗುತ್ತಿದ್ದು, ಅವುಗಳ ಮೇಲೆ ಪಿಎಂಜೆ ಮುದ್ರೆ ಇದೆ ಎಂದು ತಿಳಿಸಿದರು.