ಶ್ರೀನಗರ: ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ 60ಕ್ಕೂ ಹೆಚ್ಚು ಉಗ್ರರನ್ನು, ಭಾರತದೊಳಗೆ ನುಸುಳಿಸಲು ಗುಪ್ತಮಾರ್ಗಗಳ ಬಳಕೆ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ.
ಉತ್ತರ ಕಾಶ್ಮೀರದ ಪೂಂಜ್ ಹಾಗೂ ರಜೌರಿ ಬಳಿ ಗುಪ್ತಮಾರ್ಗಗಳನ್ನು ಬಳಕೆ ಮಾಡುತ್ತಿರುವ ಪಾಕಿಸ್ತಾನ ಉಗ್ರರನ್ನು ಭಾರತದೊಳಗೆ ನಸುಳಿಸಲು ಸತತ ಪ್ರಯತ್ನ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಪ್ತಚರ ಇಲಾಖೆ ಮಾಹಿತಿ ಬಗ್ಗೆ ಸೇನಾಧಿಕಾರಿಗಳು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನೂ ನೀಡಿಲ್ಲ.
ಭಾರತದ ಮೇಲೆ ಸದಾಕಾಲ ಸೇಡು ತೀರಿಸಿಕೊಂಡು ಬಂದಿರುವ ಪಾಕಿಸ್ತಾನಕ್ಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿದ ಬಳಿಕ ಭಾರತದ ಮೇಲಿನ ಸೇಡು ಮತ್ತಷ್ಟು ಹೆಚ್ಚಾಗಿದೆ. ಇದರಂತೆ ಭಾರತದಲ್ಲಿ ವಿಧ್ವಸಂಕ ಕೃತ್ಯವೆಸಗಲು ಸತತ ಯತ್ನಗಳನ್ನು ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆ ಬಳಿ ಉಗ್ರರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನ ನಡೆಸುತ್ತಿದೆ.
ಗಡಿಯಲ್ಲಿ ಪಾಕಿಸ್ತಾನ ಉಗ್ರರನ್ನು ನುಸುಳಿಸಲು ಯತ್ನ ನಡೆಸುತ್ತಿರುವ ಕುರಿತು ಈಗಾಗಲೇ ಭಾರತೀಯ ಸೇನಾಪಡೆಗಳು ಸಾಕ್ಷ್ಯಗಳನ್ನು ಸಂಗ್ರಹಿಸವೆ. ಗುರೇಜ್ ಮಚಿಲ್ ಹಾಗೂ ಕಾಶ್ಮೀರದ ಗುಲ್ಮಾರ್ಗ್ ಸೆಕ್ಟರ್, ಪೂಂಜ್ ಹಾಗೂ ರಜೌರಿ ಬಳಿ ಪಾಕಿಸ್ತಾನ ಸೇನೆಯ ದುರ್ವರ್ತನೆಯ ಸಾಕ್ಷ್ಯಗಳನ್ನು ಸೇನೆ ಸಂಗ್ರಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಕೂಡ ಗಡಿ ನಿಯಂತ್ರಣ ರೇಖೆ ಬಳಿ ಭಾರತ ನುಸುಳಲು ನಡೆಯುತ್ತಿರುವ ಅನೇಕ ಯತ್ನಗಳನ್ನು ವಿಫಲಗೊಳಿಸಿದ್ದೇವೆಂದು ಜಮ್ಮು ಮತ್ತು ಕಾಶ್ಮೀರದ ಡಿಜಿ ದಿಲ್ಬಾಘ್ ಸಿಂಗ್ ಅವರು ಹೇಳಿಕೆ ನೀಡಿದ್ದರು.