ಬಂಟ್ವಾಳ : ಕರ್ನಾಟಕ ಸರಕಾರದ ದ.ಕ.ಜಿ.ಪಂ.ನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ ಕಟ್ಟಡವು ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿನಾಲ್ಕೂರಿನ ಮುಲ್ಕಾಜೆಮಾಡ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ವಿದ್ಯಾರ್ಥಿ ನಿಲಯ ಕಳೆದ 3 ತಿಂಗಳಿಂದ ಮುಚ್ಚಲ್ಪಟ್ಟಿದೆ.
50 ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಿಶಾಲವಾದ ಕೊಠಡಿಗಳು, ಸುಸಜ್ಜಿತ ಕಚೇರಿ ಕೋಣೆ, ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಅಡುಗೆಕೋಣೆ, ಸ್ನಾನಗೃಹ, ಶೌಚಾಲಯಗಳು, ವಿದ್ಯಾರ್ಥಿಗಳಿಗೆ ಹಲವು ಬಟ್ಟೆ ಒಗೆಯುವ ಕಲ್ಲು ಹೀಗೆ ಎಲ್ಲ ಸೌಲಭ್ಯಗಳನ್ನೂ ಈ ವಿದ್ಯಾರ್ಥಿ ನಿಲಯ ಹೊಂದಿದೆ.
ನಗರದ ಗದ್ದಲವಿಲ್ಲದೆ ಪ್ರಶಾಂತ ಪರಿಸರದಲ್ಲಿ ಈ ವಿದ್ಯಾರ್ಥಿ ನಿಲಯ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಲೂ ಪೂರಕ ವಾತಾವರಣವನ್ನು ಅದು ಕಲ್ಪಿಸಿದೆ.1993ರಲ್ಲಿ ಸ್ಥಾಪನೆಗೊಂಡ ಈ ಹಾಸ್ಟೆಲ್‍ನಲ್ಲಿ ಇಷ್ಟೆಲ್ಲಾ ಉತ್ತಮ ವ್ಯವಸ್ಥೆ ಇದ್ದರೂ, ಅಗತ್ಯವಿದ್ದ ಸಣ್ಣಪುಟ್ಟ ರಿಪೇರಿಯನ್ನು ಮಾಡಿಸದೆ, ಬಸ್ಸು ವ್ಯವಸ್ಥೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಇಲಾಖೆಯು ಈ ವಿದ್ಯಾರ್ಥಿ ನಿಲಯವನ್ನು ಬಿ.ಸಿ.ರೋಡಿನ ತಲಪಾಡಿಯಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಿಸಿದೆ. ಸ್ವಂತ ಕಟ್ಟಡವಿದ್ದರೂ ಅದನ್ನು ಸಮರ್ಪಕವಾಗಿ ಬಳಸದೆ ದುಬಾರಿ ಬಾಡಿಗೆಯನ್ನು ನೀಡಿ ವಿದ್ಯಾರ್ಥಿನಿಲಯವನ್ನು ನಡೆಸಬೇಕಾದ ಪರಿಸ್ಥಿತಿ ಇಲಾಖೆಗೆ ಬಂದಿರುವುದು ದುರಂತ ಮೂರು ತಿಂಗಳಿಂದ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಬೀಗ ಜಡಿದಿರುವುದರಿಂದ ಅಲ್ಲಿ ಕಳ್ಳತನದ ಘಟನೆಯೂ ನಡೆದಿದೆ. ಈಗಾಗಲೇ ಗೇಟನ್ನು ಕಳ್ಳತನ ಮಾಡಿದ್ದಾರೆ. ಹೀಗೇ ಮುಂದುವರಿದರೆ ಇನ್ನಷ್ಟು ರೀತಿಯಲ್ಲಿ ಕಟ್ಟಡಕ್ಕೆ ತೊಂದರೆಯಾಗಬಹುದು.
ವಿದ್ಯಾರ್ಥಿ ನಿಲಯದಲ್ಲಿ ಕೆಲವು ಹಂಚು ಹೋದ ಕಾರಣ ಮಳೆ ನೀರು ಬೀಳುತ್ತದೆ ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಲ್ಲಿಂದ ಕಾಲೇಜಿಗೆ ಹೋಗಲು ಬಸ್ಸಿನ ಸಮಸ್ಯೆ ಇರುವುದರಿಂದ ಬಿ.ಸಿ.ರೋಡಿನ ತಲಪಾಡಿಗೆ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರ ಮಾಡಲಾಗಿದೆ. ಬಸ್ಸು ವ್ಯವಸ್ಥೆ ಸರಾಗವಾಗಿರುವುದರಿಂದ ಮಕ್ಕಳಿಗೆ ತಮ್ಮ ತಮ್ಮ ವಿದ್ಯಾಸಂಸ್ಥೆಗೆ ತೆರಳಲು ಅನುಕೂಲವಾಗುತ್ತಿದೆ.ಎಚ್. ಶಿವಣ್ಣ, ತಾಲೂಕು ವಿಸ್ತರಣಾಕಾರಿ, ಹಿಂದುಳಿದ ವರ್ಗಗಳ ಇಲಾಖೆವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಲಾಖೆಯ ಅಕಾರಿಗಳು ಗ್ರಾಮೀಣ ಪರಿಸರದಿಂದ ನಗರ ಪ್ರದೇಶಕ್ಕೆ ಹಾಸ್ಟೆನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಇರುವ ಮೂಲ ಕಟ್ಟಡವನ್ನು ಪಾಳು ಬೀಳದಂತೆ ವ್ಯವಸ್ಥಿತವಾಗಿ ಅದನ್ನು ನಿರ್ವಹಣೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿ ಸರಕಾರದ ಬೇರೆ ಇಲಾಖೆಗಾದರೂ ಆ ಕಟ್ಟಡವನ್ನು ನೀಡುವ ಪ್ರಯತ್ನ ಮಾಡುತ್ತೇನೆ. -ಪದ್ಮಶೇಖರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಹೇಳಿದರು.