ಶಹಜಹಾನ್ ಪುರ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕ ಸ್ವಾಮಿ ಚಿನ್ಮಯಾನಂದನನ್ನು ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಸ್ವಾಮಿ ಚಿನ್ಮಯಾನಂದ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 73ರ ಹರೆಯದ ಬಿಜೆಪಿ ನಾಯಕ ಕಳೆದ ಹಲವು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದು, ವೈದ್ಯಕೀಯ ತಂಡದಿಂದ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
ಶಹಜಹಾನ್ ಪುರದ ಸ್ವಾಮಿ ಸುಖದೇವಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯೋರ್ವಳು ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಸ್ವಾಮಿ ಚಿನ್ಮಯಾನಂದ ಈ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ.
ಯುವತಿ ಇದೇ ವರ್ಷದ ಆಗಸ್ಟ್ 24ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಾಕಿ ಅದರಲ್ಲಿ ಸ್ವಾಮಿ ಚಿನ್ಮಯಾನಂದರ ಕೃತ್ಯಗಳ ಬಗ್ಗೆ ತಿಳಿಸಿದ್ದಳು. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸ್ವಾಮಿ ಚಿನ್ಮಯಾನಂದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದಳು.
ನಂತರ ರಾಜಸ್ಥಾನದ ಜೈಪುರದಲ್ಲಿ ಪತ್ತೆಯಾದ ಆಕೆಯನ್ನು ಕೋರ್ಟ್‍ಗೆ ಹಾಜರುಪಡಿಸಿದಾಗ ಆಕೆ ತಾನು ಮನೆಗೆ ಹೋಗಲಿಚ್ಚಿಸುವುದಿಲ್ಲ ಎಂದು ತಿಳಿಸಿದ್ದಳು. ಹೀಗಾಗಿ ಸುಪ್ರೀಂ ಕೋರ್ಟ್ ಆಕೆಯನ್ನು ಅಖಿಲ ಭಾರತ ಮಹಿಳಾ ಮಂಡಳಿಯ ಹಾಸ್ಟೆಲ್ ನಲ್ಲಿರಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿತ್ತು.