ನವದೆಹಲಿ : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಪಡೆದಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.
ಇಂದು ಕೂಡ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಬೆಳಗ್ಗೆಯಿಂದಲೇ ದೆಹಲಿಯ ಇ.ಡಿ. ಕಚೇರಿಯಲ್ಲಿ ವಿಚಾರಣೆ ಮುಂದುವರೆಯಲಿದೆ. ನಿನ್ನೆ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ರವರೆಗೆ ನಿರಂತರವಾಗಿ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ಮುಗಿಸಿ ಹೊರಬಂದ ಶಾಸಕಿ ‘ಇ.ಡಿ. ಅಧಿಕಾರಿಗಳು ಕೆಲವೊಂದು ದಾಖಲೆಗಳನ್ನು ಕೇಳಿದ್ದಾರೆ. ದಾಖಲೆ ಒದಗಿಸುವುದಾಗಿ ನಾನು ಹೇಳಿದ್ದೇನೆ ಎಂದರು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗುವಾಗ ಹೆಬ್ಬಾಳ್ಕರ್ ಕೆಲವೊಂದು ದಾಖಲೆಗಳ ಸಮೇತ ಇ.ಡಿ. ವಿಚಾರಣೆಗೆ ಹಾಜರಾಗಿದ್ದಾರೆ.
ಇ.ಡಿ. ಅಧಿಕಾರಿಗಳು ಸೆ. 16ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ನನಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಜತೆಗೆ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದೆ. ಆದರೆ ಅವರು ದೆಹಲಿಗೆ ಬರುವಂತೆ ಸೂಚಿಸಿರುವುದರಿಂದ ನಾನು ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು.