ಷೇರು ಮಾರುಕಟ್ಟೆಯಲ್ಲಿ ಏರಿಕೆ; ಕಾರ್ಪೊರೇಟ್ ಟ್ಯಾಕ್ಸ್ ಕಡಿತ ಬೆನ್ನಲ್ಲೇ ಸೆನ್ಸೆಕ್ಸ್ ಜಿಗಿತ; ಒಂದೇ ದಿನ 5 ಲಕ್ಷ ಕೋಟಿ ಲಾಭ – ಕಹಳೆ ನ್ಯೂಸ್
ಮುಂಬೈ : ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೆಲ ವಾರಗಳಿಂದ ಹರಸಾಹಸ ಮಾಡುತ್ತಿದೆ. ಇತ್ತೀಚೆಗೆ ಎರಡು ಬಾರಿ ವಿವಿಧ ಪ್ಯಾಕೇಜ್‍ಗಳನ್ನ ಒಳಗೊಂಡ ಸುಧಾರಣಾ ಕ್ರಮಗಳನ್ನ ಘೋಷಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಇನ್ನೊಂದಿಷ್ಟು ಕ್ರಮಗಳನ್ನು ಪ್ರಕಟಿಸಿದ್ದಾರೆ. ಕಾರ್ಪೊರೇಟ್ ತೆರಿಗೆ ಕಡಿತದ ಘೋಷಣೆಯಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಗೆ ಚೈತನ್ಯ ಸಿಕ್ಕಂತಾಗಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲೂ ಭಾರತದ ಕರೆನ್ಸಿಯ ಮೌಲ್ಯ ಕೂಡ ಹೆಚ್ಚಾಗಿದೆ. ಸೆನ್ಸೆಕ್ಸ್ 850ಕ್ಕೂ ಹೆಚ್ಚು ಪಾಯಿಂಟ್ ಹೆಚ್ಚಳ ಮಾಡಿಕೊಂಡಿದೆ. ನಿಫ್ಟಿ ಸೂಚ್ಯಂಕ ಕೂಡ ಸುಮಾರು 250 ಅಂಕಗಳಷ್ಟು ಹೆಚ್ಚಳಗೊಂಡು 11 ಸಾವಿರ ಗಡಿ ಸಮೀಪ ಬಂದಿದೆ.
ಆರ್ಥಿಕ ಹಿಂಜರಿತದಲ್ಲಿ ನಲುಗಿ ಹೋಗುತ್ತಿದ್ದ ಷೇರು ವಹಿವಾಟು ಇವತ್ತು ಬಲ ಪಡೆದುಕೊಂಡಿದೆ. ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಷೇರುಗಳ ಮೌಲ್ಯ ಸರಾಸರಿಯಾಗಿ ಶೇ. 2ಕ್ಕಿಂತ ಹೆಚ್ಚು ವೃದ್ಧಿಯಾಯಿತು. ಮಧ್ಯಾಹ್ನದ ವೇಳೆ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ ಹೆಚ್ಚಳ ಮಾಡಿಕೊಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 1,800 ಅಂಕಗಳಷ್ಟು ಏರಿಕೆಗೊಂಡು ಮಿಂಚುತ್ತಿತ್ತು. ನಿಫ್ಟಿ ಸೂಚ್ಯಂಕ ಕೂಡ ಸುಮಾರು 350 ಅಂಕಗಳಷ್ಟು ಹೆಚ್ಚಳಗೊಂಡು 11 ಸಾವಿರ ಗಡಿ ದಾಟಿದೆ. ಇವತ್ತಿನ ವಹಿವಾಟಿನಲ್ಲಿ ಸಾವಿರಕ್ಕೂ ಹೆಚ್ಚು ಕಂಪನಿಗಳ ಷೇರು ಮೌಲ್ಯ ಹೆಚ್ಚಳವಾಗಿದೆ. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಾಗಿ ಕೆಲವೇ ಹೊತ್ತಲ್ಲಿ ಷೇರು ಮಾರುಕಟ್ಟೆ ಬರೋಬ್ಬರಿ 5 ಲಕ್ಷ ಕೋಟಿ ರೂ ಲಾಭ ಮಾಡಿಕೊಂಡಿದೆ.
ಗೋವಾದಲ್ಲಿ ಇಂದು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ದೇಶೀಯ ಕಂಪನಿಗಳಿಗೆ ವಿಧಿಸುವ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ. ಹೊಸ ಸ್ಥಳೀಯ ತಯಾರಿಕಾ ಸಂಸ್ಥೆಗಳಿಗೂ ಕಾರ್ಪೊರೇಟ್ ತೆರಿಗೆಯಲ್ಲಿ ವಿನಾಯಿತಿ ನೀಡಲು ನಿರ್ಧರಿಸಿದ್ಧಾರೆ. ಈ ಸಂಬಂಧ ಸುಗ್ರೀವಾಜ್ಞೆಯೂ ಜಾರಿಯಾಗಿದೆ.
ಹಣಕಾಸುವ ಸಚಿವೆಯು ಕಾರ್ಪೊರೇಟ್ ತೆರಿಗೆ ದರವನ್ನು ಶೇ. 25ರಿಂದ ಶೇ. 22ಕ್ಕೆ ಇಳಿಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ವಿನಾಯಿತಿ ಒಳಗೊಂಡಿರುವುದಿಲ್ಲ. ಅಂದರೆ, ಕಂಪನಿಯು ಬೇರಾವುದೇ ನೆರವು ಯಾಚನೆ ಮಾಡದಿದ್ದರೆ ಮಾತ್ರ ಶೇ. 22ರ ತೆರಿಗೆ ಲೆಕ್ಕಾಚಾರ ಅನ್ವಯವಾಗುತ್ತದೆ. ಹೆಚ್ಚುವರಿ ಸುಂಕ ಸೇರಿದರೆ ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಶೇ. 25.17 ಆಗಲಿದೆ.
ತಯಾರಿಕಾ ವಲಯಕ್ಕೆ ಪುಷ್ಟಿ ನೀಡಲು ಹಾಗೂ ಹೊಸ ಬಂಡವಾಳ ಹೂಡಿಕೆ ಉತ್ತೇಜಿಸಲು ನಿರ್ಮಲಾ ಸೀತಾರಾಮನ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. 2019ರ ಅಕ್ಟೋಬರ್ ನಂತರ ಸ್ಥಾಪನೆಯಾಗುವ ಸ್ಥಳೀಯ ಕಂಪನಿಗಳು ಪಾವತಿಸಬೇಕಾದ ತೆರಿಗೆ ದರವನ್ನು ಶೇ. 15ಕ್ಕೆ ನಿಗದಿ ಮಾಡಲಾಗಿದೆ. ಅಂದರೆ ಹೆಚ್ಚುವರಿ ಸುಂಕ ಸೇರಿ ಈ ತೆರಿಗೆ ದರ ಶೇ. 17.01ರಷ್ಟಾಗಲಿದೆ.
ಕಳೆದ ಬಜೆಟ್‍ನಲ್ಲಿ ಸೂಪರ್ ರಿಚ್, ಅಂದರೆ ಸಿರಿವಂತರಿಗೆ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವವಾಗಿತ್ತು. ಎಫ್‍ಪಿಐ ಸೇರಿದಂತೆ ಯಾವುದೇ ಷೇರುಗಳ ಮಾರಾಟದಿಂದ ಬಂದ ಲಾಭಕ್ಕೆ ಸೂಪರ್ ರಿಚ್ ತೆರಿಗೆ ಅನ್ವಯವಾಗುವುದಿಲ್ಲ. ಕಂಪನಿಯ ಈಕ್ವಿಟಿ ಷೇರುಗಳನ್ನ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ತೆರಿಗೆ ಪಾವತಿಸಿ ವಹಿವಾಟು ನಡೆಸಿದಾಗ ಸಿಗುವ ಲಾಭದ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಿಲ್ಲ ಎಂದು ಹಣಕಾಸು ಸಚಿವೆ ಸ್ಪಷ್ಟಪಡಿಸಿದ್ದಾರೆ.
ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ ಇಳಿಕೆ ಮಾಡುವ ನಿರ್ಧಾರದಿಂದಾಗಿ ಆರ್ಥಿಕ ಮಾರುಕಟ್ಟೆಗೆ ಪ್ರತೀ ವರ್ಷ 1.45 ಲಕ್ಷ ಕೋಟಿ ರೂ ಹರಿದುಬರಲಿದೆ. ಅಂದರೆ, ಕಾರ್ಪೊರೇಟ್ ವಲಯಕ್ಕಾಗಿ ಸರ್ಕಾರ ಇಷ್ಟು ಮೊತ್ತವನ್ನು ತ್ಯಾಗ ಮಾಡಲಿದೆ. ಸರ್ಕಾರದ ಈ ನಿರ್ಧಾರವು ಕಾರ್ಪೊರೇಟ್ ವಲಯಕ್ಕೆ ಭಾರೀ ನಿರಾಳತೆ ತಂದಿದೆ. ಶೇ. 32ರಷ್ಟು ತೆರಿಗೆ ಪಾವತಿಸುವ ಹಣಕಾಸು, ಹೋಟೆಲ್ ವಲಯದ ಉದ್ಯಮಗಳಿಗೆ ಸರಕಾರದ ಈ ಕ್ರಮ ಹೆಚ್ಚು ಲಾಭ ತರುವ ನಿರೀಕ್ಷೆ ಇದೆ.
ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಿಗೆ ನೀಡಿದ ಸಾಲದ ಪೈಕಿ ವಸೂಲಾತಿ ಆಗದೇ ಉಳಿದಿರುವ ಸಾಲಗಳನ್ನ 2020ರ ಮಾರ್ಚ್‍ವರೆಗೂ ಎನ್‍ಪಿಎ ಪಟ್ಟಿಗೆ ಸೇರ್ಪಡೆ ಮಾಡಬಾರದೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದ್ದರು. ಆದರೆ, ಸರ್ಕಾರದ ಈ ಕ್ರಮದಿಂದಾಗಿ ಕೆಟ್ಟ ಸಾಲಗಳ ಪ್ರಮಾಣ ಹೆಚ್ಚಳವಾಗಬಹುದು ಎಂಬ ಆತಂಕ ಬ್ಯಾಂಕಿಂಗ್ ವಲಯದಲ್ಲಿದೆ.
ಇನ್ನು, ಹಣಕಾಸು ಸಚಿವೆಯ ಈ ಸುಧಾರಣ ಕ್ರಮವೂ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯಕ್ಕೆ ಪುಷ್ಟಿ ನೀಡಿದೆ. ಡಾಲರ್ ಎದುರು ರೂಪಾಯಿ 66 ಪೈಸೆ ಮೌಲ್ಯ ಹೆಚ್ಚಳವಾಗಿ 70.68ಕ್ಕೆ ಬಂದಿದೆ.