ಮಂಗಳೂರಿನ ಪುರಭವನ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಯಾವುದೇ ಕನ್ವೆನ್ಶನ್ ಹಾಲ್‌ಗಳಲ್ಲಿ ಕಾರ್ಯಕ್ರಮ ನಡೆಸ ಬೇಕಿದ್ದರೆ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ – ಕಹಳೆ ನ್ಯೂಸ್
ಮಂಗಳೂರಿನ ಪುರಭವನ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಯಾವುದೇ ಕನ್ವೆನ್ಶನ್ ಹಾಲ್‌ಗಳಲ್ಲಿ ಇನ್ನು ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸ ಬೇಕಿದ್ದರೆ ಪೊಲೀಸ್ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯ. ಅಷ್ಟೇ ಅಲ್ಲ, ಉಪ ವಿಭಾಗಾಧಿಕಾರಿಯ ಅನುಮತಿಯನ್ನೂ ಪಡೆಯಬೇಕು. ಇದು ಮಂಗಳೂರು ನಗರ ಪೊಲೀಸ್ ಆಯುಕ್ತರ ಖಡಕ್ ಸೂಚನೆ.
ಇದುವರೆಗೆ ಮೈದಾನದಂಥ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವಾಗ ಪೊಲೀಸರ ಅನುಮತಿ ಕಡ್ಡಾಯವಾಗಿತ್ತು. ಆದರೆ ಹಾಲ್‌ಗಳ ಒಳಗೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇರುವುದಿಲ್ಲ. ಕಾರ್ಯಕ್ರಮ ನಡೆಸುವ ಸಂಘ, ಸಂಸ್ಥೆಗಳ ಬಗ್ಗೆ ಪೂರ್ವಭಾವಿ ಮಾಹಿತಿ ಇರಲಿ ಎನ್ನುವ ಉದ್ದೇಶದಿಂದ ಖಾಸಗಿ ಸಹಿತ ಯಾವುದೇ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಈ ಠಾಣೆಯ ಪೊಲೀಸ್ ನಿರೀಕ್ಷಕರು ಮಂಗಳೂರು ಮಹಾ ನಗರ ಪಾಲಿಕೆ ಪತ್ರ ಬರೆದು, ಕಾರ್ಯಕ್ರಮ ಆಯೋಜಿಸುವ ಸಂಘಟನೆಗಳು ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಮೇಲಾಧಿಕಾರಿಗಳ ಆದೇಶವಿದೆ ಎಂದು ತಿಳಿಸಿದ್ದಾರೆ. ಕೆಲವು ಸೂಕ್ಷ್ಮ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ನಿರ್ಣಯ ಕೈಗೊಂಡಿದೆ ಎನ್ನುವ ಮಾಹಿತಿ ಇದೆ.
ಆಯೋಜಕರಿಗೆ ತೊಂದರೆ
ಮಂಗಳೂರು ಪುರಭವನದಲ್ಲಿ ನೃತ್ಯ, ನಾಟಕ, ವಾರ್ಷಿಕೋತ್ಸವ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದೇ ಹೆಚ್ಚು. ಇದುವರೆಗೆ ಕಾರ್ಯಕ್ರಮ ಆಯೋಜಕರು ನಗರ ಪಾಲಿಕೆ ಕಚೇರಿಗೆ ಬಂದು ಪುರಭವನ ಕಾದಿರಿಸಿದರೆ ಸಾಕಿತ್ತು. ಆದರೆ ಇನ್ನು ಅರ್ಜಿ ಹಿಡಿದು ಪೊಲೀಸ್ ಠಾಣೆ, ಉಪ ವಿಭಾಗಾಧಿಕಾರಿ ಕಚೇರಿಗೆ ಅಲೆಯಬೇಕು. ಇದುವರೆಗೆ ನಿರಾಕ್ಷೇಪಣಾ ಪತ್ರ ಪಡೆಯುವ ಕ್ರಮ ಇರಲಿಲ್ಲ. ಈಗ ಏಕಾಏಕಿ ಇಂತಹ ಸೂಚನೆ ನೀಡಿದ ಕಾರಣ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಕಲಾ ಸಂಘಟಕರ ಅಳಲು.
ಮದುವೆಗಳಿಗೆ ಅನ್ವಯಿಸಲ್ಲ
ನಿರಾಕ್ಷೇಪಣಾ ಪತ್ರ ಪಡೆಯಬೇಕೆಂಬ ಆದೇಶ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಸೀಮಿತ. ಮದುವೆ, ನಿಶ್ಚಿತಾರ್ಥ, ಸೀಮಂತದಂಥ ವೈಯಕ್ತಿಕ ಕಾರ್ಯಕ್ರಮಗಳು, ಶಾಲೆಗಳ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿರಾಕ್ಷೇಪಣಾ ಪತ್ರ ಪಡೆದ ಬಳಿಕ ಪುರಭವನ ಕಾಯ್ದಿರಿಸಲು ಅವಕಾಶ ನೀಡುವಂತೆ ಪೊಲೀಸ್ ಇಲಾಖೆಯಿಂದ ಸೂಚನೆ ಬಂದಿದೆ. ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯಗೊಳಿಸ ಬಹುದು. ಆದರೆ ಇದನ್ನು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಘ, ಸಂಸ್ಥೆಗಳಿಗೆ ಅನ್ವಯ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಪಾಲಿಕೆ ಆಯುಕ್ತರ ಗಮನಕ್ಕೆ ತಂದು ಒಂದೆರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
-ವಿಜಯಕುಮಾರ್, ಕಂದಾಯ ಅಧಿಕಾರಿ (ಪುರಭವನ ಉಸ್ತುವಾರಿ), ಮನಪಾ
ಪುರಭವನವನ್ನು ಒಂದು ಉದ್ದೇಶಕ್ಕೆ ಪಡೆದು ಬೇರೆಯೇ ಉದ್ದೇಶದ ಸಭೆ ನಡೆಸುವ ಬಗ್ಗೆ ಮಾಹಿತಿ ಇದೆ. ಇದು ಕೆಲವೊಮ್ಮೆ ಸಾಮರಸ್ಯ ಕೆಡಿಸುವ ಸಾಧ್ಯತೆಯೂ ಇದೆ. ಹಾಗಾಗಿ ಪೊಲೀಸ್ ಇಲಾಖೆಗೆ ಮಾಹಿತಿ ಇರಲಿ ಎನ್ನುವ ಕಾರಣಕ್ಕಾಗಿ ಈ ಸೂಚನೆ ನೀಡಲಾಗಿದೆ. ಯಾರಿಗೂ ತೊಂದರೆ ನೀಡುವ ಉದ್ದೇಶ ಇದರಲ್ಲಿ ಇಲ್ಲ.
ಡಾ.ಹರ್ಷ ಪಿ.ಎಸ್, ಮಂಗಳೂರು ನಗರ ಪೊಲೀಸ್ ಕಮಿಷನರ್