Friday, September 20, 2024
ಕ್ರೀಡೆ

ಬೆಳ್ತಂಗಡಿಯ ಈಶಾಶರ್ಮ ರಾಜ್ಯದ ಚೆಸ್ ಚತುರೆ – ಕಹಳೆ ನ್ಯೂಸ್

ಮಂಗಳೂರು: ವಿಶ್ವನಾಥನ್ ಆನಂದ್, ಪ್ರವೀಣ್ ತಿಪ್ಸೆ, ಕೊನೇರು ಹಂಪಿ, ಡಿ.ಹರಿಕಾ, ದಿವ್ಯೇಂದು ಬರುವಾ ಮೊದಲಾದ ಗ್ರಾೃಂಡ್‌ಮಾಸ್ಟರ್‌ಗಳನ್ನು ಜಗತ್ತಿಗೆ ಪರಿಚಯಿಸಿರುವ ದೇಶದಲ್ಲಿ ಹೊಸ ಹೊಸ ಚೆಸ್ ಪ್ರತಿಭೆಗಳು ಪ್ರತಿದಿನವೂ ಬರುತ್ತಲೇ ಇದ್ದಾರೆ. ಸಾಧನೆಯ ಸಾಲಿಗೆ ಹೊಸ ಸೇರ್ಪಡೆ ಕರ್ನಾಟಕದ ಚೆಸ್ ಪ್ರತಿಭೆ ಈಶಾ ಶರ್ಮ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈಶಾ ಶರ್ಮ ಕರ್ನಾಟಕದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹಂಗೇರಿಯ ಬಲಟೊನ್‌ನಲ್ಲಿ ಆ.27ರಿಂದ ಸೆ.4ರವರೆಗೆ ನಡೆದ ‘ಸಮ್ಮರ್ಸ್‌ ಎಂಡ್ -ಬಲಟೊನ್ ಐಎಂ ಟೂರ್ನಮೆಂಟ್’ನಲ್ಲಿ ಈ ಸಾಧನೆ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಲೊವಾಕಿಯಾದ ಡೇವಿಡ್ ಮುರ್ಕೊ(2186 ರೇಟಿಂಗ್), ಬೆಲ್ಜಿಯಂನ ಲಿನಾರ್ಟ್ ಲೆನರ್ಟ್‌(2341) ಮತ್ತು ಇಂಗ್ಲೆಂಡ್‌ನ ಲೈಲ್ ಮಾರ್ಕ್(2185) ಅವರನ್ನು ಪರಾಭವಗೊಳಿಸಿದ್ದ ಈಶಾ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ಹಂಗೇರಿಯ ನ್ಹಾಟ್ ಮಿನ್ಹ್(2388), ಸ್ಲೊವೇಕಿಯಾದ ಸೂಟಾ ಆಂಡ್ರಾಸ್(2268) ಮತ್ತು ಹಂಗೇರಿಯ ಸಾಟಿ ಒಲಿವರ್(2223) ಜತೆ ಡ್ರಾ ಸಾಧಿಸಿದ್ದರು.
2017ರಲ್ಲಿ ಶಾರ್ಜಾ ಮಾಸ್ಟರ್‌ನಲ್ಲಿ ಮೊದಲ ನಾರ್ಮ್, 2018ರ ವಿಶ್ವ ಕಿರಿಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ನಾರ್ಮ್ ಗಳಿಸಿದ್ದ ಈಶಾ, ಹಂಗೇರಿಯಲ್ಲಿ ಮೂರನೇ ನಾರ್ಮ್ ಪಡೆದು ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್(ಡಬ್ಲುೃಐಎಂ) ಎನಿಸಿದರು.

ಜಾಹೀರಾತು

ಬಾಲ್ಯದಲ್ಲೇ ಸಾಧನೆಯ ಹಂಬಲ
ಬೆಳ್ತಂಗಡಿಯ ವೈದ್ಯ ದಂಪತಿ ಡಾ.ಶ್ರೀಹರಿ- ಡಾ.ವಿದ್ಯಾ ಅಭಯ್ ಪುತ್ರಿ ಈಶಾ ಬಾಲ್ಯದಿಂದಲೇ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಹಾಡು ಮತ್ತು ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಯಾವುದಾದರೊಂದು ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಗುರಿ ಇಟ್ಟಿದ್ದ ಇಶಾ, 11ನೇ ವಯಸ್ಸಿನಲ್ಲಿ ಶಾಲಾ ಮಟ್ಟದ ಚೆಸ್ ಟೂರ್ನಿ ಗೆದ್ದರು. ಚೆಸ್‌ನಲ್ಲೇ ಇನ್ನಷ್ಟು ಗೆಲುವು ಕಾಣಬೇಕೆಂಬ ಹಂಬಲದಿಂದ ಕಾಲೇಜಿನಲ್ಲಿ ವಿಜ್ಞಾನದ ಬದಲು ಕಲಾ ವಿಷಯ ಆರಿಸಿಕೊಂಡರು. ಪ್ರಸಕ್ತ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಮೊದಲ ವರ್ಷ ಪದವಿ ವಿದ್ಯಾರ್ಥಿನಿ.

ಸಾಧನೆಗೆ ಹಲವು ಪುರಸ್ಕಾರ
ಈಶಾ 2014ರಲ್ಲಿ ರಾಷ್ಟ್ರೀಯ ಶಾಲಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. 2015ರಲ್ಲಿ ಮಹಿಳಾ ಕೆಡೆಟ್ ಮಾಸ್ಟರ್ ಆಗಿ, ಏಷ್ಯನ್ ಕಿರಿಯರ ರ‌್ಯಾಪಿಡ್ ಟೂರ್ನಿಯಲ್ಲಿ ಸ್ವರ್ಣ ಪದಕ ಪಡೆದರು. ರಾಷ್ಟ್ರೀಯ ಅಂಡರ್-19 ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಪ್ರಸ್ತುತ ಇವರ ರೇಟಿಂಗ್ 2181.

ನಾನು ಈ ಮಟ್ಟದವರೆಗೆ ಏರಲು ಕಾರಣ ಹೆತ್ತವರು. ಹೈಸ್ಕೂಲ್‌ನಲ್ಲಿ ಪಿಡಿ ಸಂತೋಷ್, ಸಂದೇಶ್, ಪ್ರಾಂಶುಪಾಲ ಮನಮೋಹನ್ ನಾಯಕ್, ಪಿಯು ಕಾಲೇಜು ಪ್ರಾಂಶುಪಾಲ ಡಾ.ದಿನೇಶ್ ಚೌಟ ಮೊದಲಾದವರು ಪ್ರೋತ್ಸಾಹ ನೀಡಿದ್ದಾರೆ. ನನಗೆ ಮಾರ್ಗದರ್ಶನ ನೀಡಿದ ಎಲ್ಲ ಕೋಚ್‌ಗಳ ಪಾತ್ರ ಬಲು ದೊಡ್ಡದು.

– ಈಶಾ, ಚೆಸ್ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್

ಈಶಾ ಚೆಸ್‌ನಲ್ಲಿ ಸಾಧನೆ ಮಾಡುತ್ತ ಹೋಗುತ್ತಿದ್ದಂತೆ ಹೊರರಾಜ್ಯಗಳಿಗೆ ಪ್ರವಾಸ ಹೆಚ್ಚಾಗತೊಡಗಿತು. ಒಂದು ಟೂರ್ನಮೆಂಟ್‌ಗೆ ಹೋದರೆ ಕೆಲವೊಂದು ಬಾರಿ 15 ದಿನ ಹೊರಗಿರಬೇಕಾಗುತ್ತದೆ. ಮಗಳ ಕನಸು ಹಾಗೂ ಭವಿಷ್ಯ ಮುಖ್ಯವಾಗಿದ್ದರಿಂದ ನಾನು ವೈದ್ಯ ವೃತ್ತಿ ತ್ಯಜಿಸಿ ಸಹಕರಿಸುತ್ತಿದ್ದೇನೆ.

– ವಿದ್ಯಾ ಅಭಯ್, ಈಶಾ ತಾಯಿ