ಬಣ್ಣದ ಜಗತ್ತೆ ಹಾಗೇರೀ…….! ಇಲ್ಲಿ ಬಣ್ಣಕ್ಕೆ ಯಾವ ಬಣ್ಣ ಸೇರಬೇಕೊ ಅದು ತುಂಬಾ ಬೇಗ ಸೇರಿ ಏಳು ಬಣ್ಣದಲ್ಲಿ ಹೊಂಬಣ್ಣವಾಗಿ ಹೊಮ್ಮುತ್ತದೆ…….! ಎಲ್ಲಾ ಬಣ್ಣಗಳು ಎಲ್ಲರಿಗೂ ಇಷ್ಟ ಆಗಬೇಕು ಅಂತಾ ಏನು ಇಲ್ಲ. ಒಬ್ಬರಿಗೆ ಕಪ್ಪು ಬಣ್ಣ ಇಷ್ಟವಾದರೆ, ಇನ್ನೋಬ್ಬರಿಗೆ ಕೆಂಪು ಬಣ್ಣ ಹೀಗೆ ಏಳು ಬಣ್ಣದಲ್ಲಿ ಕಲೆತು ಒಂದು ಬಣ್ಣವಾಗುವುದು ಅಷ್ಟೂ ಸುಲಭದ ಮಾತಲ್ಲ…..! ಹೇ ಇದೇನೂ ಬಣ್ಣದ ಕತೆ ಅಂತೀರಾ ಇವತ್ತು ನಾವು ಬಿಗ್ ಬಾಸ್ ಮನೆಯ ಬಿಗ್ ವಾಯ್ಸ್ ಬಗ್ಗೆ ಹೇಳೋಕೆ ಬಂದ್ವಿ….., ಯಾರವರು……? ಹೌದು, ಎಲ್ಲಿಯವರು ಅಂತೀರಾ…..? ಹೇಳ್ತೀನಿ.
ಬಿಗ್ ಬಾಸ್ ಅಂದ್ರೆ ಸುದೀಪ್ ಸರ್ ಮಾತ್ರ ನೆನಪಾಗುತ್ತಾರೆ…… ಅಲ್ಲಿನ ಸ್ಪರ್ಧಿಗಳನ್ನು ಕಣ್ಣಾರೆ ನೋಡಿ ಕೆಲವೊಂದು ಬಾರಿ ಸಮಯ ಬಾರಿಸೋದನ್ನ ನೋಡತಿವಿ, ಹೋ … ಸಮಯ ಬೆಳಿಗ್ಗೆ 8 ಗಂಟೆ ಅಂದಾಗ ಎಲ್ಲರ ಮನೆಯ ಟಿವಿಗಳತ್ತ ಕಿವಿಗಳು ವಾಲುತ್ತವೆ ಆದರೆ ವ್ಯಕ್ತಿ ನಮ್ಮ ಕಣ್ಣಿಗೆ ಕಾಣಿಸೋದಿಲ್ಲ… ನಾವು ನೀವು ಕುಳಿತು ಬಿಗ್ ಬಾಸ್ ವಾಯ್ಸ್ ಚೆನ್ನಾಗಿ ಇದೆ ಅಂತೀವಿ ಅಲ್ವಾ……. ! ಅವರು ಮತ್ತಾರೂ ಅಲ್ಲಾ ನಮ್ಮ ತುಳುನಾಡಿನ ಪ್ರತಿಭೆ ಪ್ರದೀಪ್ ಬಡೆಕ್ಕಿಲ.
ಇವರು ಪುತ್ತೂರಿನ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಬಂಟ್ವಾಳ ದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿಕೊಂಡು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿದ ಇವರು ಇಂದು ದೇಶವೆ ಎದ್ದು ಅವರ ಧ್ವನಿಯನ್ನು ಕೇಳುವಷ್ಟೂ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಅವರೆ ಹೇಳುವಂತೆ ನಡೆದ ಹಾದಿಯೆಲ್ಲ ಹೂವಿನ ಹಾಸಿಗೆಯಾಗಿರಲಿಲ್ಲ… ವೃತ್ತಿ ಬದುಕಿಗೆ ಪದವಿ ಆದರೆ ಸಾಲದು ಪದಗಳ ದಾಸನಾಗಬೇಕು ಎಂದು ಕನಸು ಕಂಡ ಇವರಿಗೆ ನಟನೆ ಅಂದ್ರೆ ಪ್ರಾಣ…
ಇವರಿಗೆ ಮನೆಯ ಸೊಬಗು ತುಂಬಾ ಇಷ್ಟವಂತೆ. ತಂಗಿಯ ತುಂಟತನ, ಅಮ್ಮನ ಪ್ರೀತಿಯ ನಡುವೆ ಬೆಳೆದ ಇವರಿಗೆ ಸಾಂಸ್ಕ್ಕತಿಕ ಕಲೆ, ಹಾಡುಗಾರಿಕೆ, ಭಜನೆ, ಮಾತು ಎಲ್ಲಾ ಮನೆಯ ಪರಿಸರದಲ್ಲಿ ಕಲಿತವರು…… ಕಾಲೇಜು ದಿನಗಳಲ್ಲಿ ಹವ್ಯಾಸಿ ಬರಹಗಾರ ಆದ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಹಳೆಯ ಹಾಡುಗಳನ್ನು ಆಲಿಸುವ ಈ ಮನಕೆ, ವೇದಿಕೆ ಸಿಕ್ಕರೆ ಸಾಕು ಮನವೆ ಮೌನವಾಗುವಂತೆ ಹಾಡುತ್ತಿದ್ದರು. 2006ರಲ್ಲಿ ಟಿವಿ 9 ಸುದ್ದಿವಾಹಿನಿಯಲ್ಲಿ ಪತ್ರಕರ್ತರು ಹಾಗೂ ನಿರೂಪಕರಾಗಿ ವೃತ್ತಿ ಬದುಕಿನ ಕಸಿಕಟ್ಟಿದರು.
ಬೆಂಗಳೂರಿನ ಬಿಗ್ ಎಫ್‍ಎಂ ರೇಡಿಯೋದಲ್ಲಿ ಪ್ರತಿಭೆ ಮೆರೆದು ನಂತರ ಆಜ್ ತಕ್ ಸುದ್ದಿ ವಾಹಿನಿಯ ಬೆಂಗಳೂರು ವಲಯದ ವರದಿಗಾರರಾಗಿ ಸೇವೆ ಸಲ್ಲಿಸಿದ ಖ್ಯಾತಿ ಪಡೆದಿರುವ ಇವರು ಮತ್ತೆ ಟಿವಿ 9 ವಾಹಿನಿಯ ಲಾಂಚ್ ಟೀಂನಲ್ಲಿ ಇದ್ದು ಹಿನ್ನೆಲೆ ಧ್ವನಿಯಾಗಿ ಒಂದು ಹೊಸ ರೂಪ ತಂದ ಹೆಮ್ಮೆ ಬಡೆಕ್ಕಿಲ ಪ್ರದೀಪ್ ಅವರದ್ದು.
ನಂತರ ಸುವರ್ಣ ವಾಹಿನಿಯಲ್ಲಿ ಪ್ರೋಮೊ ಚೀಫ್ ಆಗಿ ಹೆಸರುವಾಸಿಯಾದ ಇವರು ನಂತರ ಕೃಷ್ಣ ರುಕ್ಮಿಣಿ, ಲಕುಮಿ ಧಾರಾವಾಹಿಗಳಲ್ಲಿ ಅಭಿನಯಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಿಗ್ ಬಾಸ್, ಸೂಪರ್ ಮಿನಿಟ್,ಹಳ್ಳಿ ಹೈದ ಪ್ಯಾಟೆಗ್ ಬಂದ, ಈಟಿವಿಯ ಮನೆ ಮುಂದೆ ಮಹಾಲಕ್ಷ್ಮಿ ಹೀಗೆ ಸುಮಾರು ಕನ್ನಡದ ಎಲ್ಲಾ ರೀಯಾಲಿಟಿ ಷೋ ನಾ ಧ್ವನಿಯಾದ ಖ್ಯಾತಿ ಇವರದ್ದು. ಅಲ್ಲದೇ ಅನೇಕ ಧಾರಾವಾಹಿಗಳ ಹಿನ್ನೆಲೆ ಧ್ವನಿಯಲ್ಲಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿ ಮಾತನಾಡುತ್ತಿದೆ ಎಂದರೆ….. ಅದು ಪ್ರತಿಭೆಯ ಗರಿ ಎಂದರೆ ತಪ್ಪಾಗಲಾರದು….!
ಅನೇಕ ಸಾಕ್ಷ್ಯ ಚಿತ್ರಗಳಿಗೂ ಕೂಡ ಧ್ವನಿಯಾದ ಇವರಿಗೆ ಎಲ್ಲಾ ರಂಗದ ಪರಿಚಯ ಕಣ್ಣಲ್ಲೆ ಕಟ್ಟಿಕೊಂಡಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ. ಸುಮಾರು 25000ಕ್ಕೂ ಹೆಚ್ಚು ಹಿನ್ನೆಲೆ ಧ್ವನಿ ನೀಡಿದ ಇವರು ನಮ್ಮ ನಾಡಿನ ಬಹು ಬೇಡಿಕೆಯ ಪ್ರತಿಭೆಯಾಗಿ ಇಂದು ಹೊರಹೊಮ್ಮಿರುವುದು ನಮ್ಮ ನಾಡಿನ ಹೆಮ್ಮೆ ಅನಿಸುತ್ತದೆ….. ಸದಾ ಸರಳ ಮನದ ಇವರು ಮಾತನಾಡಲು ಕುಳಿತರೆ ಮೌನವೆ ನಾಚಿ ಮುಗುಳು ನಗುಂತೆ ಮೋಡಿ ಮಾಡುವಂತಹ ಚತುರ ಎನಿಸಿದರೆ ತಪ್ಪಾಗಲಾರದು…..
ನಮ್ಮ ಮನೆಯ ಗಿಡದ ಹೂವೊಂದು ಇನ್ಯಾರದೊ ತಲೆಯಲಿ ಮೇಳೈಸಿ ನಲಿಯುದಕ್ಕಿಂತ ಯಾವುದೊ ದೇವಾಲಯದಲ್ಲಿ ಇರಲಿ ಎಂದು ಭಾವಿಸುವ ನಮ್ಮ ಜನ ಕಲೆಯನ್ನು ಕೂಡ ಹಾಗೇ ಗೌರವಿಸುತ್ತಾರೆ……. ಕಲೆಯಲ್ಲೂ ಬಣ್ಣಗಳನ್ನೂ ಹುಡುಕುವ ಜನತೆಗೆ ಬಹುಬೇಗ ಹತ್ತಿರವಾದ ಮನ ಸುಮಾರು ಐದು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಇವರಿಗೆ ಅಲ್ಲಿನ ಕಲಾದೇಗುಲದಲ್ಲೂ ಕೂಡ ಬಹು ಬೇಗ ಹೂವಾಗಿ ಅರಳುವಂತಹ ಸುಭಾಗ್ಯ ದೊರೆಯಲಿ ಎಂಬುದೆ ನಮ್ಮ ಆಶಯ.
ಬರೆದಷ್ಟೂ ಅಕ್ಷರಗಳುಂಟು, ವೇದ ಮಂತ್ರ ಉಪನೀಷತ್ತುಗಳು ಬುದ್ದಿಯ ಗಂಟು, ಇಡೀ ಬ್ರಹ್ಮಾಂಡವೆಂಬುದು ಬುತ್ತಿಯ ಗಂಟು, ತೆರೆದು ನೋಡಿದಷ್ಟೂ ತರತರ ಉಂಟು, ಸ್ವಲ್ಪವಾದರೂ ಬಿಚ್ಚಿ ಸವಿಯಿರಿ ರುಚಿಯುಂಟು, ಈ ಕಲೆಯ ಮನವನ್ನು ನಮ್ಮ ನಾಡಿನ ಜನತೆ ಗೌರವಿಸುತ್ತಾರೆ ಎಂಬ ಅಚಲ ನಂಬಿಕೆ ನಮಗುಂಟು…….! ಅದೇನೆ ಇರಲಿ ಧ್ವನಿಯಲ್ಲಿ ಮೋಡಿ ಮಾಡಿ ಮನವನ್ನೂ ಸೂರೆಗೊಳಿಸಿದ ನಾವಿಕನ ಎಲ್ಲಾ ಕನಸುಗಳು ಬಹುಬೇಗ ಕೈಗೂಡಲಿ ಎಂಬುದು ನಮ್ಮ ಆಶಯ.
ಸುಜಾತ ಗಜೇಂದ್ರ ಜೈನ್