ರಸ್ತೆಯಲ್ಲಿ ಹೊಂಡ ಗುಂಡಿ, ಮಳೆ ನಿಂತರೆ ರಸ್ತೆಯೆಲ್ಲಾ ಧೂಳು; ಇದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅವಸ್ಥೆ – ಕಹಳೆ ನ್ಯೂಸ್
ಬಂಟ್ವಾಳ : ಮಳೆ ಬಂದರೆ ರಸ್ತೆಯಲ್ಲಿ ಹೊಂಡ ಗುಂಡಿ, ಮಳೆ ನಿಂತರೆ ರಸ್ತೆಯೆಲ್ಲಾ ಧೂಳು. ಇದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅವಸ್ಥೆ. ಮಳೆ ನಿರಂತರವಾಗಿ ಬಂತು ಎಂದರೆ ಪ್ರತಿ ವರ್ಷ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿಗಳದ್ದೇ ಕಾರುಬಾರು. ಈ ಬಾರಿಯೂ ಅದೇ ಸ್ಥಿತಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವಂತಿಲ್ಲ. ಡಾಮಾರು ರಸ್ತೆ ಯೆಲ್ಲಾ ಮಾಯವಾಗಿ ಗುಂಡಿಗಳಿಗೆ ಬಿದ್ದು ಎದ್ದು ಹೋಗುವ ವಾಹನಗಳ ಸಾಲು ಸಾಲು.
ಮಳೆ ನಿಲ್ಲದೆ ಗುಂಡಿ ಮುಚ್ಚಲು ಸಾಧ್ಯವಿಲ್ಲ ಎಂಬುದು ಇಲಾಖೆಯ ವಾದ. ಆದರೆ ತಾತ್ಕಾಲಿಕ ವಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡುವ ನಿಟ್ಟಿನಲ್ಲಿ ರಸ್ತೆಗೆ ಜಲ್ಲಿ ಕಲ್ಲು, ಜಲ್ಲಿಕಲ್ಲು ಹುಡಿ ಹಾಗೂ ಸಿಮೆಂಟ್ ಮಿಶ್ರಿತ ಪುಡಿಯನ್ನು ಹಾಕಿದ್ದರು. ಆದರೆ ಇಲಾಖೆ ಹಾಕಿದ ಈ ಜಲ್ಲಿ ಮಿಶ್ರಿತ ಹುಡಿ ಮಳೆ ನಿಂತ ಕೂಡಲೇ ಎದ್ದು ಹೋಗಿದ್ದು ಹೆದ್ದಾರಿಯುದ್ದಕ್ಕೂ ದೂಳು ಅವರಿಸಿದೆ.
ಘನವಾಹನಗಳು ಅತಿಯಾದ ವೇಗದಲ್ಲಿ ಹೋದಾಗ ದೂಳಿನಿಂದ ಕಣ್ಣುಬಿಟ್ಟು ನೋಡುವಂತಿಲ್ಲ, ರಸ್ತೆ ದಾಟುವಂತಿಲ್ಲ, ಅಂಗಡಿಯವರು ವ್ಯಾಪಾರ ಮಾಡುವಂತಿಲ್ಲ ಇದು ಸದ್ಯದ ಸ್ಥಿತಿ. ಗುಂಡಿ ಮುಚ್ಚಿದ್ದೀರಿ ಅದರೆ ದೂಳಿನ ಸಮಸ್ಯೆ ಯಿಂದ ರೋಗದ ಭೀತಿ ಎದುರಾಗಿದೆ ಎಂದು ಧೂಳಿನ ಸಮಸ್ಯೆಯಿಂದ ಬಳಲುತ್ತಿರುವ ಪಾಣೆಮಂಗಳೂರು ಪ್ರದೇಶದ ಜನರು ಇಲಾಖೆಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.