ಪುತ್ತೂರು: ಕ್ರೀಡೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಸಮಾಜದ ವಿವಿಧ ವರ್ಗದ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ಕ್ರೀಡೆಯಲ್ಲಿ ಅಡಗಿದೆ. ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿ ಮಾಡುವ ಮೂಲಕ ಈ ಫಿಲೋಮಿನಾ ಸಂಸ್ಥೆಯ ಕ್ರೀಡಾಂಗಣ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂತ ಫಿಲೋಮಿನಾ ಕಾಲೇಜು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 23 ರಿಂದ 26 ರ ತನಕ ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ‘ಬಿ. ಸದಾನಂದ ಮತ್ತು ವಾಮನ’ ಸ್ಮರಣಾರ್ಥ ಮಂಗಳೂರು ವಿವಿ ಅಂತರ್ ಕಾಲೇಜು ಮಂಗಳೂರು ವಲಯ ಮತ್ತು ಅಂತರ್ ವಲಯ ಪುರುಷರ ಫುಟ್‍ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ, ಮಾತನಾಡಿದರು. ನಮ್ಮ ರಾಷ್ಟ್ರವು ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಎರಡನೆಯ ಸ್ತಾನದಲ್ಲಿದೆ. ಆದರೆ ಕ್ರೀಡೆಯಲ್ಲಿ ನಮ್ಮ ಸ್ಥಾನ ಯಾವುದು ಎನ್ನುವುದು ಗುರುತಿಸಲೂ ಆಗುತ್ತಿಲ್ಲ. ಕ್ರೀಡೆಯಲ್ಲಿ ಸಾಧನೆ ಮಾಡಿದ ದೇಶ ಎಲ್ಲರಿಗೂ ತಿಳಿಯುತ್ತದೆ. ಕ್ರೀಡಾ ಕ್ಷೇತ್ರದ ವಿಶೇಷ ಸಾಧಕರನ್ನು ರೋಲ್ ಮೋಡೆಲ್‍ಗಳನ್ನಾಗಿ ಪರಿಗಣಿಸಿ ಗುರಿ ಮುಟ್ಟಲು ಪ್ರಯತ್ನಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಕ ಜಿಲ್ಲಾ ಫುಟ್‍ಬಾಲ್ ಅಸೋಸಿಯೇಶನ್ ಚೆಯರ್‍ಮ್ಯಾನ್ ಡಿ ಎಮ್ ಅಸ್ಲಾಮ್ ಮಾತನಾಡಿ, ಕ್ರೀಡಾ ಕ್ಷೇತ್ರದ ಯಶಸ್ಸಿಗೆ ಕ್ರೀಡಾ ಸ್ಪೂರ್ತಿಯೇ ತಳಹದಿ. ನಾವು ಸೇವಿಸುತ್ತಿರುವ ಆಹಾರವು ವಿಷಭರಿತವಾಗಿರುವ ಇತ್ತೀಚ್ಛೆಗಿನ ದಿನಗಳಲ್ಲಿ ಆರೋಗ್ಯವನ್ನು ಸುಸ್ಥಿಯಲ್ಲಿಟ್ಟುಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಅತಿ ಅಗತ್ಯ ಎಂದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಕ್ರೀಡೆಯು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಶಿಸ್ತು ಮತ್ತು ಸತತ ಪರಿಶ್ರಮದಿಂದ ಅಭ್ಯಾಸದಲ್ಲಿ ತೊಡಗಿಕೊಂಡಾಗ ಕ್ರೀಡಾ ಸಾಧನೆಯನ್ನು ಸಾಧಿಸಬಹುದು ಎಂದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಮಾತನಾಡಿ, ಪ್ರತಿಭೆ, ತಂಡ ಪ್ರಯತ್ನ ಮತ್ತು ಒಮ್ಮತದ ಭಾವನೆ ಜೊತೆ ಸೇರಿದಾಗ ವಿಶೇಷ ಸಾಧನೆ ಸಾಧ್ಯವಾಗುತ್ತದೆ. ಕ್ರೀಡಾ ಪಟುಗಳು ಶಿಸ್ತು ಮತ್ತು ಸತತ ಅಭ್ಯಾಸದ ಮನಃಸ್ಥಿತಿಯೊಂದಿಗೆ ಮುಂದುವರಿಯಬೇಕು ಎಂದರು.
ಪುತ್ತೂರಿನ ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಮಾಮಚ್ಚನ್ ಮಾತನಾಡಿ, ಪುತ್ತೂರಿನ ಶೈಕ್ಷಣಿಕ ಕ್ರಾಂತಿಯಲ್ಲಿ ಮೊ| ಆ್ಯಂಟನಿ ಪತ್ರಾವೊ ಅವರ ಕೊಡುಗೆ ಅಪಾರ. ಈ ಸಂಸ್ಥೆ ಶಿಕ್ಷಣದೊಂದಿಗೆ ಕ್ರೀಡೆಗೂ ಸಾಕಷ್ಟು ಪ್ರೋತ್ಸಾಹ ನೀಡಿದೆ. ಈ ಕ್ರೀಡಾಂಗಣದಲ್ಲಿ ಹಲವಾರು ವಿಶ್ವ ಮಟ್ಟದ ಕ್ರೀಡಾಪಟುಗಳು ರೂಪುಗೊಂಡಿರುತ್ತಾರೆ. ಕ್ರೀಡೆ ನಮ್ಮ ಬದುಕಿನ ದಾರಿಯನ್ನು ನಿರ್ಧರಿಸಬಲ್ಲುದು ಎಂದರು.
ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ವೇಟ್ ಲಿಫ್ಟರ್ ಕೃಷ್ಣಪ್ಪ ಗೌಡ ಮತ್ತು ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಕ್ರೀಡಾಪಟು ಸಜ್ಜನ್ ಕುಮಾರ್ ಕೆ ಇವರನ್ನು ವಿಶೇಷ ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಅತಿ ವಂ. ಆಲ್ಫ್ರೆಡ್ ಜೆ ಪಿಂಟೊ ಮಾತನಾಡಿ, ಕ್ರೀಡೆಗಳು ಶಾಂತಿ ಸಮನ್ವಯತೆಗೆ ಸಹಕಾರಿ. ಕ್ರೀಡಾಪಟುಗಳು ಬೆವರು ಸುರಿಸಿ ಆಟವಾಡುವ ಮನೋಭಾವನೆ ಹೊಂದಿರಬೇಕು. ಕ್ರೀಡಾ ಕೂಟದ ಸಂಘಟನೆಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಕಾಲೇಜಿನ ರಂಗ ಕಲಾ ಸಂಘದ ಸದಸ್ಯರು ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ. ಮ್ಯಾಕ್ಸಿಂ ಕಾರ್ಲ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು. ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.