Friday, September 20, 2024
ಸುದ್ದಿ

ಉಗ್ರ ಹಫೀಜ್ ತಿಂಗಳ ಖರ್ಚಿಗೆ ವಿಶ್ವಸಂಸ್ಥೆಯನ್ನು ಕಾಡಿ ಬೇಡಿ ಒಪ್ಪಿಸಿದ ಪಾಕ್ – ಕಹಳೆ ನ್ಯೂಸ್

ನ್ಯೂಯಾರ್ಕ್ : “ಭಯೋತ್ಪಾದಕ ಹಫೀಜ್ ಸಯೀದ್ ‘ನಾಲ್ವರು ಇರುವ ಕುಟುಂಬವನ್ನು’ ಪೋಷಿಸುತ್ತಿದ್ದಾನೆ. ಅವರ ಆಹಾರ, ಬಟ್ಟೆ ಇತರ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಆತನದು. ಆದ್ದರಿಂದ ತಿಂಗಳ ಖರ್ಚಿನ 1,50,000 ರುಪಾಯಿ ಹಣವನ್ನಾದರೂ ವಿಥ್ ಡ್ರಾ ಮಾಡಲು ಅವಕಾಶ ನೀಡಬೇಕು” ಎಂದು ಪಾಕಿಸ್ತಾನ ಸರ್ಕಾರವು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಮನವಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

26/11 ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಇದೇ ಹಫೀಜ್ ಸಯೀದ್. ಮನವಿ ಇರುವ ಪತ್ರವನ್ನು ಆಗಸ್ಟ್ ಹದಿನೈದನೇ ತಾರೀಕು ಪಾಕಿಸ್ತಾನ ಸಲ್ಲಿಸಿದೆ. ಗಡುವಿನೊಳಗೆ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ಆ ಮನವಿಯನ್ನು ಪುರಸ್ಕರಿಸಲಾಗಿದೆ.

ಜಾಹೀರಾತು

“ಪಾಕಿಸ್ತಾನವು ಅಮೆರಿಕಕ್ಕೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನೆರವಾಗುವ ಮೂಲಕ ದೊಡ್ಡ ಪ್ರಮಾದ ಎಸಗಿತು” ಎಂದು ಈಚೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕದಲ್ಲಿ ಮಾಧ್ಯಮಗಳ ಎದುರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಏಕೆಂದರೆ, ಹಫೀಜ್ ಸಯೀದ್ ನ ಕುಟುಂಬ ನಿರ್ವಹಣೆ ಬಗ್ಗೆ ಅಷ್ಟು ಆಸಕ್ತಿ ತೋರುತ್ತಿದೆ.

ತಿಂಗಳಿಗೆ 1,50,000 ರುಪಾಯಿ ವಿಥ್ ಡ್ರಾ ಮಾಡುವುದಕ್ಕೆ ಅನುಮತಿ: 

ಹಫೀಜ್ ಸಯೀದ್ ಹಾಗೂ ಆತನ ಕುಟುಂಬ ನಿರ್ವಹಣೆಗಾಗಿ ತಿಂಗಳಿಗೆ 1,50,000 ರುಪಾಯಿ ವಿಥ್ ಡ್ರಾ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಬಳಿ ಕೇಳಿಕೊಂಡಿತ್ತು. ಈ ಬೇಡಿಕೆಗೆ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗಾಗಿ ಹಣ ವಿಥ್ ಡ್ರಾ ಮಾಡುವುದಕ್ಕೆ ಒಪ್ಪಿಗೆ ದೊರೆತಿದೆ.

ನಲವತ್ತಾರು ಸಾವಿರ ಪೆನ್ಷನ್ ಬರುತ್ತದೆ:
ಪಾಕಿಸ್ತಾನಿ ನಾಗರಿಕ ಹಫೀಜ್ ಸಯೀದ್ ಲಾಹೋರ್ ನ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದು, ಇಪ್ಪತ್ತೈದು ವರ್ಷಗಳ ಸೇವೆ ಪೂರ್ಣಗೊಳಿಸಿದ್ದರಿಂದ ನಲವತ್ತಾರು ಸಾವಿರ ಪೆನ್ಷನ್ ಬ್ಯಾಂಕ್ ಖಾತೆ ಮೂಲಕ ಬರುತ್ತಿದೆ ಎಂದು ಪಾಕ್ ಸರ್ಕಾರ ತಿಳಿಸಿತ್ತು. ಅದಕ್ಕೂ ಮುನ್ನ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಹಫೀಜ್ ಸಯೀದ್ ನ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿತ್ತು.

ಲಷ್ಕರ್- ಇ- ತೈಬಾ ಹಾಗೂ ಜಮಾತ್- ಉದ್- ದವಾಗೆ ನಿಷೇಧ:
ಲಷ್ಕರ್- ಇ- ತೈಬಾ ಹಾಗೂ ಜಮಾತ್- ಉದ್- ದವಾದ ಸ್ಥಾಪಕ ಹಫೀಜ್ ಸಯೀದ್ ನನ್ನು ಯುಎನ್ ಎಸ್ ಸಿ ನಿಷೇಧಿಸಿತ್ತು. ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ತನ್ನ ನೆಲದಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳುವ ಪಾಕಿಸ್ತಾನದ ಮುಖವಾಡ ಈಗಿನ ನಡೆಯ ಮೂಲಕ ಕಳಚಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಯೋತ್ಪಾದನೆ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ಆರೋಪ:
ಹಫೀಜ್ ಸಯೀದ್ ನ ಸಂಘಟನೆಗಳ ಮೇಲೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಇದೆ. ಕಳೆದ ಜುಲೈ ಹದಿನೇಳರಂದು ಹಫೀಜ್ ಸಯೀದ್ ನನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಭಾರತ, ಭಯೋತ್ಪಾದನೆಯನ್ನು ಪಾಕಿಸ್ತಾನ ಪೋಷಿಸುತ್ತಿದೆ. ಇಂಥ ಬಂಧನವೆಲ್ಲ ಕಣ್ಣೊರೆಸುವ ತಂತ್ರ ಅಷ್ಟೇ ಎಂದಿತ್ತು.