Saturday, November 23, 2024
ಸುದ್ದಿ

ಸಿದ್ದರಾಮಯ್ಯ ತಲೆದಂಡಕ್ಕೆ ಮೂಲ ಕಾಂಗ್ರೇಸಿಗರ ರಣತಂತ್ರ; ಕುತೂಹಲ ಮೂಡಿಸಿದ ಖರ್ಗೆ, ಪರಂ ನಡೆ – ಕಹಳೆ ನ್ಯೂಸ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರಲ್ಲ. ಆದರೂ ಪಕ್ಷಕ್ಕೆ ಸೇರ್ಪಡೆಯಾಗಿ ಕೇವಲ 6 ವರ್ಷದಲ್ಲಿ ಅವರು ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಇದು ಸಾಮಾನ್ಯವಾಗಿ ಮೂಲ ಕಾಂಗ್ರೆಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಆಗ ಕೇಂದ್ರದಲ್ಲೂ ಸತತ 10 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೈಕಮಾಂಡ್ ಅನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾವ ರಾಜ್ಯ ನಾಯಕನಿಗೂ ಇರಲಿಲ್ಲ. ಅಲ್ಲದೆ, ಸಿದ್ದರಾಮಯ್ಯ ಸಹ ರಾಜ್ಯದಲ್ಲಿ ಮಾಸ್ ನಾಯಕನಾಗಿ ಹೊರ ಹೊಮ್ಮಿದ್ದ ಪರಿಣಾಮ ಕಳೆದ ಒಂದು ದಶಕದಿಂದ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಯುಗ ಇತ್ತು ಎಂದರೆ ತಪ್ಪಾಗಲಾರದು.

ಆದರೆ, ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದ್ದರೆ, ರಾಜ್ಯದಲ್ಲೂ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ರಾಜ್ಯ ಕಾಂಗ್ರೆಸ್, ನಿರೀಕ್ಷೆಗಳ ನಡುವೆಯೂ ಅತ್ಯಂತ ಕೆಟ್ಟ ಫಲಿತಾಂಶವನ್ನು ಎದುರುಗೊಳ್ಳುವಂತಾಗಿತ್ತು. ಪರಿಣಾಮ ಇದೀಗ ಕೈ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಒಳಗೊಳಗೆ ಮೂಲ ಕಾಂಗ್ರೇಸಿಗರು ಹಾಗೂ ವಲಸೆ ಕಾಂಗ್ರೇಸಿಗರು ಎಂಬ ಎರಡು ಬಣ ನಿರ್ಮಾಣವಾಗಿದ್ದು, ಸಮರಕ್ಕೆ ವೇದಿಕೆಯೂ ಸಜ್ಜಾದಂತೆ ಕಂಡುಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೈಕಿ ಮೂಲ ಕಾಂಗ್ರೇಸಿಗರು ಶತಾಯಗತಾಯ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲೇಬೇಕು ಎಂದು ಪಣ ತೊಟ್ಟಂತೆ ಕಾಣುತ್ತಿದೆ. ಗುರುವಾರ ನಡೆದ ಪಕ್ಷದ ಸಭೆಯಲ್ಲಿ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಜಟಾಪಟಿ ಇದಕ್ಕೊಂದು ತಾಜಾ ಉದಾಹರಣೆಯಷ್ಟೇ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಮೂಲ ಕಾಂಗ್ರೇಸಿಗರಲ್ಲಿ ಸಿದ್ದರಾಮಯ್ಯ ವಿರುದ್ಧದ ಈ ಒಳಬೇಗುದಿ ಹೆಚ್ಚಾಗಿದ್ದು, ಸಿದ್ದರಾಮಯ್ಯ ಅವರಿಂದ ಎಲ್ಲಾ ಅಧಿಕಾರವನ್ನು ಕಸಿದುಕೊಂಡು ಪಕ್ಷದಲ್ಲಿ ಸೈಡ್‍ಲೈನ್ ಮಾಡಲು ಸದ್ದಿಲ್ಲದೆ ಒಂದು ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಅದು ಏನ್ ಗೊತ್ತಾ?.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ರೆಬೆಲ್ ಲೀಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೂ ಅವರನ್ನು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಇದೀಗ ಮೈತ್ರಿ ಸರ್ಕಾರ ಉರುಳಿ ಬಿದ್ದಿದೆ. ಬಿಜೆಪಿ ಸರ್ಕಾರ ರಚನೆ ಮಾಡಿ ಈಗಾಗಲೇ ಎರಡು ತಿಂಗಳೇ ಕಳೆದಿದೆ.

ಆದರೆ, ಎಐಸಿಸಿ ಹೈಕಮಾಂಡ್ ಮಾತ್ರ ಈವರೆಗೆ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಕುರಿತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಚರ್ಚೆ ನಡೆಸಲು ಸ್ವತಃ ಸಿದ್ದರಾಮಯ್ಯ ಎರಡು ಬಾರಿ ದೆಹಲಿಗೆ ತೆರಳಿದರೂ ಸೋನಿಯಾ ಗಾಂಧಿ ತಮ್ಮ ಭೇಟಿಗೆ ಅವಕಾಶ ನೀಡುತ್ತಿಲ್ಲ. ಆದರೆ, ಈ ನಡುವೆ ಸೋನಿಯಾ ಗಾಂಧಿ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಈ ನಂತರವೇ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕೇವಲ ಸಿಎಲ್‍ಪಿ ನಾಯಕ ಹುದ್ದೆಗೆ ಮಾತ್ರ ಸೀಮಿತಗೊಳಿಸಿ ವಿಪಕ್ಷ ನಾಯಕನ ಸ್ಥಾನಕ್ಕೆ ಮತ್ತೋರ್ವ ಹೊಸ ನಾಯಕನನ್ನು ನೇಮಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಇದೀಗ ಕಾಂಗ್ರೆಸ್ ಮೂಲಗಳು ನೀಡುತ್ತಿರುವ ಮಾಹಿತಿ ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ಈ ಮಾಹಿತಿ ಪ್ರಕಾರ ಜಿ. ಪರಮೇಶ್ವರ್ ಮೂಲ ಕಾಂಗ್ರೇಸಿಗರ ಬಣದ ನೇತೃತ್ವ ವಹಿಸಿದ್ದು, ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಮಾತ್ರವಲ್ಲ, ಸಿಎಲ್‍ಪಿ ಸ್ಥಾನವನ್ನೂ ಕಸಿಯಲು ಯೋಜನೆ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇವು ಭವಿಷ್ಯದಲ್ಲಿ ಕೈ ಪಕ್ಷದಲ್ಲಿ ಕಂಡುಬರಲಿರುವ ಬದಲಾವಣೆಗಳಿಗೆ ಸಾಕ್ಷಿ ನುಡಿಯುವಂತಿದೆ.

ಪರಮೇಶ್ವರ್ ಅಂಡ್ ಟೀಮ್‍ನ ಮೊದಲ ಟಾರ್ಗೆಟ್ ದಿನೇಶ್ ಗುಂಡೂರಾವ್:
ಪ್ರಸ್ತುತ ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು ಆರಂಭದಿಂದಲೂ ಸಿದ್ದರಾಮಯ್ಯ ಬಣದಲ್ಲಿ ಕಾಸಿಕೊಂಡ ನಾಯಕ. ಆದರೆ, ಲೋಕಸಭೆ ಚುನಾವಣೆ ಸೋಲಿನ ನಂತರ ಅವರ ನಾಯಕತ್ವದ ವಿರುದ್ಧವೂ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.

ಶಾಸಕರಾಗಿದ್ದ ರೋಷನ್ ಬೇಗ್‍ರಿಂದ ಎಸ್.ಟಿ. ಸೋಮಶೇಖರ್‍ವರೆಗೆ ಎಲ್ಲರೂ ಅವರ ನಾಯಕತ್ವದವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‍ಗೆ ಈ ಕುರಿತು ಸಾಕಷ್ಟು ದೂರುಗಳು ಸಹ ದಾಖಲಾಗಿವೆ. ಹೀಗಾಗಿ ಸಿದ್ದರಾಮಯ್ಯ ಅವರ ತಲೆದಂಡಕ್ಕಿಂತ ಮುಂಚಿತವಾಗಿ ಅವರ ಆಪ್ತರಾದ ದಿನೇಶ ಗುಂಡೂರಾವ್ ತಲೆದಂಡ ಖಚಿತ ಎನ್ನಲಾಗುತ್ತಿದೆ. ಈ ರಣತಂತ್ರವನ್ನು ಖುದ್ದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರೇ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕುತೂಹಲ ಕೆರಳಿಸಿದ ಮಲ್ಲಿಕಾರ್ಜುನ ಖರ್ಗೆ ನಡೆ;
ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಪೈಕಿ ಮಲ್ಲಿಕಾರ್ಜುನ ಖರ್ಗೆ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡು ಕಾಂಗ್ರೆಸ್ ಗೆ ಬಂದಾಗ ಅವರನ್ನು ವಿಪಕ್ಷ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಇದಕ್ಕೆ ಕಟು ವಿರೋಧ ವ್ಯಕ್ತಪಡಿಸಿದವರ ಪೈಕಿ ಮಲ್ಲಿಕಾರ್ಜುನ ಖರ್ಗೆ ಅಗ್ರಗಣ್ಯರು.

ಆರಂಭದಿಂದಲೂ ಸಿದ್ದರಾಮಯ್ಯ ವಿರುದ್ಧ ಖರ್ಗೆಗೆ ಅಸಮಾಧಾನ ಇದ್ದೇ ಇತ್ತು. ಹೀಗಾಗಿ ಮೂಲ ಕಾಂಗ್ರೇಸಿಗರ ಬಣದ ನಾಯಕತ್ವವನ್ನು ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಸಿದ್ದರಾಮಯ್ಯ ಪಾತ್ರ ಮಹತ್ವವಾದದ್ದು.

ಇದೇ ಕಾರಣಕ್ಕೆ ಖರ್ಗೆ ಅವರಿಗೆ ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ಇದೆ. ಅಲ್ಲದೆ, ಸಿದ್ದರಾಮಯ್ಯ ಸೈಡ್‍ಲೈನ್ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತದೆ ಎಂಬ ಭಯವೂ ಅವರಿಗೆ ಇದೆ. ಇದೇ ಕಾರಣಕ್ಕೆ ಸ್ವತಃ ಅವರೂ ಸಹ ಸಿದ್ದರಾಮಯ್ಯ ಓರ್ವ ರೆಬೆಲ್ ನಾಯಕ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಒಂದೆಡೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಅವರು ಹಾಗೂ ಅವರ ಬಣದ ಪ್ರಮುಖ ನಾಯಕರನ್ನು ಪಕ್ಷದಲ್ಲಿ ಸೈಡ್‍ಲೈನ್ ಮಾಡಲು ಈಗಾಗಲೇ ಮೂಲ ಕಾಂಗ್ರೇಸಿಗರ ಬ್ಲೂಪ್ರಿಂಟ್ ಸಿದ್ಧವಾಗಿದೆ. ಈ ನಡುವೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆ ಸಾಕಷ್ಟು ಕುತೂಹಲ ಮೂಡಿಸಿದ್ದು, ಭವಿಷ್ಯದಲ್ಲಿ ಕೈ ಪಾಳಯ ಬೃಹತ್ ರಾಜಕೀಯ ನಾಟಕ ಒಂದಕ್ಕೆ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.