ಬೆಂಗಳೂರು : ವಿಶ್ವವಿಖ್ಯಾತ ದಸರಾವನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ದೇಶ, ವಿದೇಶಗಳಿಂದ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗಲು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಹಾಗೂ ನೈರುತ್ಯ ರೈಲ್ವೆ ಘೋಷಿಸಿದೆ.
ಭಾನುವಾರದಿಂದ 9 ದಿನಗಳ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿವಿಧ ಕಾರ್ಯಕ್ರಮಗಳು ಆರಂಭವಾಗಲಿದೆ. ಈ ದಸರಾ ಸಂಭ್ರಮದಲ್ಲಿ ಭಾಗಿಯಾಗಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಮೈಸೂರಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಿದೆ. ಜೊತೆಗೆ ನೈರುತ್ಯ ರೈಲ್ವೆ ಇಲಾಖೆ ಕೂಡ ಅರಮನೆ ನಗರಿಗೆ ದಸರಾ ಪ್ರಯುಕ್ತ ಹೆಚ್ಚುವರಿ ರೈಲು ಸೇವೆ ಒದಗಿಸಿದೆ.
ಅ.4ರಿಂದ ಅ.8ರವರೆಗೆ ದಸರಾ ಸಂಭ್ರಮದಲ್ಲಿ ಪ್ರವಾಸಿಗರು ಭಾಗಿಯಾಗಲು ನೈರುತ್ಯ ರೈಲ್ವೆ ಇಲಾಖೆ ಸುವಿದಾ ವಿಶೇಷ ರೈಲನ್ನು ಘೋಷಣೆ ಮಾಡಿದೆ. ಬೆಂಗಳೂರು- ಮೈಸೂರು ನಡುವೆ ಈ ರೈಲು ಪ್ರಯಾಣಿಸಲಿದೆ.
ಕೆಎಸ್‍ಆರ್‍ಟಿಸಿಯಿಂದ 2500 ಹೆಚ್ಚುವರಿ ಬಸ್ ಸೌಲಭ್ಯ:
ಅ.4ರಿಂದ 8ರವರೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಅಂತರರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು 2500 ಹೆಚ್ಚುವರಿ ಬಸ್ ಸೌಲಭ್ಯವನ್ನು ಕೆಎಸ್‍ಆರ್‍ಟಿಸಿ ಘೋಷಿಸಿದೆ. ಈ ನಾಲ್ಕು ದಿನಗಳ ಕಾಲ ಬೆಂಗಳೂರು-ಮೈಸೂರು ನಡುವೆ ಸಂಚಾರ ಹೆಚ್ಚಾಗಿರುವ ಹಿನ್ನೆಲೆ ಹೆಚ್ಚುವರಿಯಾಗಿ 175 ಬಸ್‍ಗಳನ್ನು ಈ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಮೈಸೂರಿನಿಂದ ಹತ್ತಿರದ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ರವಾಸ ಪ್ಯಾಕೇಜ್‍ಗಳನ್ನು ಕೂಡ ಘೋಷಿಸಲಾಗಿದೆ.