Friday, September 20, 2024
ಸುದ್ದಿ

ಫಿಲೋಮಿನಾದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆ ; ಸೇವೆಯು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಬೇಕು ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ – ಕಹಳೆ ನ್ಯೂಸ್

ಪುತ್ತೂರು: ಪ್ರತಿಫಲ ಬಯಸದೆ ಮಾಡುವ ಕಾಯಕವೇ ರಾಷ್ಟ್ರೀಯ ಸೇವಾ ಯೋಜನೆ. ರಾಷ್ಟ್ರೀಯ ಸೇವಾ ಯೋಜನೆಯ ಸೇವೆ ಪ್ರಶಂಸನೀಯ. ಸೇವೆಯು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಘಟಕವು ಸೆಪ್ಟಂಬರ್ 27ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಮತ್ತು ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸಮಾಜ ನಮ್ಮ ಮನೆ, ಸೇವೆಯೇ ನಮ್ಮ ಉಸಿರು, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಭಗವಂತನನ್ನು ಕಾಣಬೇಕು, ಆಗ ನಮ್ಮ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ. ಸ್ವಾರ್ಥವೇ ತುಂಬಿರುವ ಈ ಸಮಾಜದಲ್ಲಿ ನಿಸ್ವಾರ್ಥ ಸೇವಕರ ಅನಿವಾರ್ಯತೆ ಇದೆ. ಅಂತಹ ಸೇವಕರು ನಾವಾಗಬೇಕು. ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಬ್ರೈಟ್ ವೇ ಕನ್ಸಲ್ಟೆನ್ಸಿ ಮಂಗಳೂರು ಇದರ ನಿರ್ದೇಶಕ ಮನಮೋಹನ ರೈ ಮಾತನಾಡಿ, ಸೇವೆಗೆ ಪಣತೊಟ್ಟು ನಿಲ್ಲುವ ಮನಸ್ಸು ವಿದ್ಯಾರ್ಥಿ ದೆಸೆಯಲ್ಲಿ ಮೂಡಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಮಾಜಮುಖಿಯಾಗಿ ತೆರೆದುಕೊಳ್ಳುವ ಚಿಂತನೆ ಬೆಳೆಸಿಕೊಳ್ಳಬೇಕು. ರಾಷ್ಟೀಯ ಸೇವಾ ಯೋಜನೆಯಂತಹ ಚಟುವಟಿಕೆಗಳು ಧನಾತ್ಮಕ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮ್ಯಾಕ್ಸಿಮ್ ಕಾರ್ಲ್ ಮಾತನಾಡಿ, ಸೇವೆ ಮಾಡಬೇಕೆಂಬ ಮನೋಭಾವನೆ ಮನುಷ್ಯನ ಅಂತರಂಗದಲ್ಲಿ ಮೂಡಬೇಕು. ಸಾರ್ವಜನಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರೆಲ್ಲ ಸೇವಕರೇ ಆಗಿರುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆಯನ್ನು ಕೊಡುವಂತಹ ಘಟಕ. ಇದು ಪರಿಪೂರ್ಣ ಬದುಕನ್ನು ಸಾಧಿಸಲು ಅಗತ್ಯ. ಸಮಾಜಕ್ಕೆ ಉತ್ತಮ ಸೇವಕರನ್ನು ಕೊಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆಯನ್ನು ರೂಪಿಸುತ್ತಾ ಬಂದಿದೆ. ಇಂತಹ ಯೋಜನೆಯ ಸುವರ್ಣ ಸಂಭ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನಮಗೆಲ್ಲ ಸಂತಸದ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ,
ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಚಲನ ಚಕ್ರಗಳು. ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸ್ವಚ್ಛತೆ ಹಾಗು ಶಿಸ್ತು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೆಯ. ಈ ಘಟಕದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾಲೇಜಿನ ಎಲ್ಲ್ಲಾ ಕಾರ್ಯಕ್ರಮದಲ್ಲಿ ಬೆನ್ನೆಲುಬಾಗಿ ನಿಂತು ನಿಸ್ವಾರ್ಥ ಸೇವೆಯಿಂದ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಇಂತಹ ಸೇವಾ ಮನೋಭಾವನೆ ಸಮಾಜಕ್ಕೆ, ದೇಶಕ್ಕೆ ಕೊಡುಗೆಯಾಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹಿಂದೆ ಕಾರ್ಯಕ್ರಮಾಧಿಕಾಗಳಾಗಿ ಸೇವೆ ಸಲ್ಲಿಸಿದ್ದ ಪ್ರಾಧ್ಯಾಪಕರನ್ನು ಕೃತಜ್ಞತಾಪೂರ್ವಕವಾಗಿ ಗೌರವಿಸಲಾಯಿತು.

ಅರ್ಪಿತಾ ಮತ್ತು ಬಳಗ ಪ್ರಾರ್ಥಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ದಿನಕರ ಅಂಚನ್ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಶಶಿಪ್ರಭಾ ಬಿ ವಂದಿಸಿದರು. ಪೂಜಾ ಕಾರ್ಯಕ್ರಮ ನಿರೂಪಿಸಿದರು.