Friday, September 20, 2024
ಸುದ್ದಿ

ರಾಷ್ಟ್ರೀಯ ಸೇವಾ ಯೋಜನೆ ಬದುಕಿನ ಯಶಸ್ಸಿಗೆ ಸಹಕಾರಿ ; ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಚಂದ್ರಶೇಖರ್ ಬಿಳಿನೆಲೆ – ಕಹಳೆ ನ್ಯೂಸ್

ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಹೇಳಿಕೊಡುತ್ತದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇದು ಸಹಕಾರಿ ಆಗುತ್ತದೆ ಎಂದು ಕೆ.ವಿ.ಜಿ ಪಾಲಿಟಿಕ್ನಿಕ್ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಚಂದ್ರಶೇಖರ್ ಬಿಳಿನೆಲೆ ಹೇಳಿದರು.

ಇವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಪ್ರಯುಕ್ತ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುತ್ತದೆ. ಇದರಿಂದ ಯುವಜನತೆ ಮಾನವೀಯ ಸಂಬಂಧಗಳನ್ನು ತಮ್ಮ ಜೀವನದಲ್ಲಿ ಗಟ್ಟಿಗೊಳಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳಾನ್ನಾಗಿಸುತ್ತದೆ. ಮುಖ್ಯವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆಯುವ ವಾರ್ಷಿಕ ವಿಶೇಷ ಶಿಬಿರವು ಇಂತಹ ಅನೇಕ ವಿಚಾರಗಳನ್ನು ಕಲಿಸಿಕೊಡುತ್ತದೆ. ಒಟ್ಟಾರೆಯಾಗಿ ಇದು ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಅನೇಕ ರೀತಿಯ ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ಮಾತನಾಡಿ, ಸೇವೆ ಎಂಬುದು ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ಮಾಡುವಂತಹದ್ದು. ಇಂದಿನ ಯುವಜನತೆ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅನಿವಾರ್ಯ. ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆಗಳು ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಕಾನೂನು ಕಾಲೇಜಿನ ಸಂಚಾಲಕರಾದ ಶ್ರೀ ವಿಜಯನಾರಾಯ ಕೆ. ಎಂ., ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ, ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿ ನಾಯಕ ಮಹಾವೀರ ಪ್ರಸಾದ್, ನಾಯಕಿ ನಿವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಕುಮಾರ್ ಎಸ್. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿದರು. ವಿದ್ಯಾರ್ಥಿ ವಂದೀಪ್ ವಿ. ಚೇರಾಲ್ ವಂದಿಸಿದರು.

ಜಾಹೀರಾತು

ನಂತರ ನಡೆದ ಮೊದಲನೇ ಅವಧಿಯ ಉಪನ್ಯಾಸದಲ್ಲಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಡಬದ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹೇಶ್ ನಿಟಿಲಾಪುರ ಮಾತನಾಡಿ, ಯುವಜನತೆಯಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆಯು ಮಾಡುತ್ತಿದೆ. ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಶ ಕಟ್ಟುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸಿದರು.

ದ್ವಿತೀಯ ಅವಧಿಯ ಉಪನ್ಯಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕರಾದ ಶ್ರೀ ಪ್ರವೀಣ ಸರಳಾಯ, ವಿದ್ಯಾರ್ಥಿಗಳು ಗ್ರಾಮಗಳಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಶ್ರೀ ನ. ಸೀತಾರಾಮ ಅವರು ಮಾತನಾಡಿ, ಸೇವೆ ಎಂಬುದು ಭಾರತೀಯರಲ್ಲಿ ರಕ್ತಗತವಾಗಿದ್ದು, ಅದನ್ನು ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆಗಳು ಪ್ರತಿನಿಧಿಸುತ್ತಿವೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಣ್ಣ ಸಣ್ಣ ಕೆಲಸಗಳಿಂದಲೂ ಸಾಧ್ಯವಿದೆ. ಇದನ್ನು ವಿದ್ಯಾರ್ಥಿಗಳು ನನಸು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಡಾ. ಬಿ. ಕೆ. ರವೀಂದ್ರ ಮಾತನಾಡಿ, ಮಾನವೀಯ ಮೌಲ್ಯಗಳು ಮರೆತು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆಗಳು ಅದನ್ನು ನೆನಪಿಸುತ್ತಿವೆ. ಇದರ ಶಿಬಿರಗಳು ಒಬ್ಬ ವಿದ್ಯಾರ್ಥಿಗೆ ಜೀವನಶೈಲಿಯನ್ನು ಹೇಳಿಕೊಡುತ್ತದೆ ಎಂದು ಹೇಳಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಅಧಿಕಾರಿಯಾದ ಶ್ರೀ ರಘುರಾಜ್ ಉಬರಡ್ಕ, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ ಎ. ಪಿ., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕುಮಾರ್ ಎಸ್. ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿ ನಾಯಕ ಮಹಾವೀರ ಪ್ರಸಾದ್, ನಾಯಕಿ ನಿವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶುಭಲಕ್ಷ್ಮಿ ಸ್ವಾಗತಿಸಿ, ರಕ್ಷಾ ವಂದಿಸಿದರು. ವಿದ್ಯಾರ್ಥಿಗಳಾದ ದಿಕ್ಷೀತ್‍ಕುಮಾರ್, ಸುನಿಲ್ ಮತ್ತು ವಿದ್ಯಾರ್ಥಿನಿ ಅರ್ಪಿತಾ ಕಾರ್ಯಕ್ರಮವನ್ನು ನಿರೂಪಿಸಿದರು.