ಪ್ರತಿ ಗ್ರಾಮದ ಸಮಗ್ರ ಮಾಹಿತಿ ಕ್ರೋಢೀಕರಣಕ್ಕೆ ಕ್ರಮ ; ಮಂಗಳೂರಿನಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಿ.ಟಿ ರವಿ – ಕಹಳೆ ನ್ಯೂಸ್
ಮಂಗಳೂರು: ರಾಜ್ಯದ ಪ್ರತಿ ಗ್ರಾಮದ ಇತಿಹಾಸ, ಭೌಗೋಳಿಕ, ಸಾಂಸ್ಕೃತಿಕ, ಜಾನಪದ ಹೀಗೆ ವಿವಿಧ ಅಂಶಗಳನ್ನೊಳಗೊಂಡಂತೆ ಗ್ರಾಮದ ವಿಶೇಷತೆಯ ಮಾಹಿತಿಯನ್ನು ಕ್ರೋಢೀಕರಿಸಿ ಅವುಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 2020ರ ಡಿಸೆಂಬರ್ ನೊಳಗೆ ಸರ್ಕಾರ ಈ ಪರಿಕಲ್ಪನೆಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಇದ್ಕಕಾಗಿ ಪ್ರತಿ ಗ್ರಾಮದ ಮಾಹಿತಿಯನ್ನು ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಕಲೆ ಹಾಕಲಾಗುವುದು. ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಪ್ರತ್ಯೇಕ ಜಾಲತಾಣದ ಮೂಲಕ ಅನಾವರಣಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಜಯಂತಿ ಆಚರಣೆಯ ಸ್ವರೂಪದಲ್ಲಿ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿನ ತಜ್ಞರ ಅಭಿಮತವನ್ನು ಸಂಗ್ರಹಿಸಿ ಅನಂತರ ಕ್ರಮಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯಲ್ಲಿನ ಯಾತ್ರಿ ನಿವಾಸಗಳ ಅಗತ್ಯತೆಗಳ ಬಗೆಗೆ ಅಧ್ಯಯನ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಹಾಜರಿದ್ದರು.